ಮಹೇಶ ತಿಮರೊಡ್ಡಿ ಮೂಲ ಯಾವುದು? ಕಲ್ಲಡ್ಕ ಪ್ರಭಾಕರ ಭಟ್ರು ಈಗ ಎಲ್ಲಿದ್ದಾರೆ? ಮಗು ಚಿವುಟಿ ಜೋಗಳ ಹಾಡುವವರಾರು? ಇಂಥದ್ದು ಜಿಜ್ಞಾಸೆ ವ್ಯಕ್ತಪಡಿಸಿದ್ದು ಯಾರು ಗೊತ್ತಾ?

sorake press meet
ವಿಜಯಪುರ ನಗರದ ನೂತನ ಪ್ರವಾಸಿ ಮಂದಿರದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಸುದ್ದಿಗೋಷ್ಠಿ ನಡೆಸಿದರು. ಮಲ್ಲಿಕಾರ್ಜುನ ಲೋಣಿ, ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್, ಸರಫರಾಜ್ ಮಿರ್ದೆ ಮತ್ತಿತರರಿದ್ದಾರೆ.
Published on

ವಿಜಯಪುರ: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನೆತ್ತಿರುವ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಅವರು, ಪ್ರಕರಣದಲ್ಲಿ ಪದೇ ಪದೇ ಕೇಳಿ ಬರುತ್ತಿರುವ ಮಹೇಶ ತಿಮರೊಡ್ಡಿ ಎಂಬಾತನ ಮೂಲ ಯಾವುದು? ಇಷ್ಟೆಲ್ಲ ನಡೆಯುತ್ತಿದ್ದರೂ ಕಲ್ಲಡ್ಕ ಪ್ರಭಾಕರ ಭಟ್ರು ಎಲ್ಲಿದ್ದಾರೆ? ತೊಟ್ಟಿಲಲ್ಲಿರುವ ಮಗುವನ್ನು ಚಿವುಟಿ ಮೇಲೆ ಜೋಗುಳ ಹಾಡುತ್ತಿರುವವರು ಯಾರು? ಎಂದಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ನ್ಯಾಯಾಲಯದ ಆದೇಶದಂತೆ ಎಸ್‌ಐಟಿ ರಚನೆ ಮಾಡಿದೆ. ಇನ್ನೂ ಎಫ್‌ಎಸ್‌ಐಎಲ್ ವರದಿ ಬಂದಿಲ್ಲ. ಈಗಾಗಲೇ ತನಿಖೆ ಪ್ರಗತಿಯಲ್ಲಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ. ಅದಕ್ಕೂ ಮುನ್ನ ತಿಮರೊಡ್ಡಿ ಯಾರು? ಅವರ ಮೂಲ ಯಾವುದು? ಪದೇ ಪದೇ ಜನರ ಭಾವನೆ ಕೆರಳಿಸುತ್ತಿದ್ದ ಕಲ್ಲಡ್ಕ ಪ್ರಭಾಕರ ಭಟ್ರು ಎಲ್ಲಿದ್ದಾರೆ? ಅವರು ಮಹೇಶ ತಿಮರೊಡ್ಡಿ ಜೊತೆಗಿದ್ದಾರಾ ಅಥವಾ ಬಿಜೆಪಿ ಮತ್ತು ಸಂಘ ಪರಿವಾರದ ಜೊತೆಗಿದ್ದಾರಾ? ಎಂಬುದನ್ನು ತಿಳಿಯಬೇಕೆಂದು ಗುರುವಾರ ಸುದ್ದಿಗೋಷ್ಠಿಯೊಂದರಲ್ಲಿ ಅವರು ಜಿಜ್ಞಾಸೆ ವ್ಯಕ್ತಪಡಿಸಿದರು.

ಎಸ್‌ಐಟಿ ರಚನೆಯನ್ನು ಸ್ವತಃ ವೀರೇಂದ್ರ ಹೆಗ್ಗಡೆ ಅವರೇ ಸ್ವಾಗತಿಸಿದ್ದಾರೆ. ಹೀಗಿರುವಾಗ ಎಸ್‌ಐಟಿ ತನಿಖೆ ಕುರಿತು ಮಾತನಾಡುವುದೇಕೆ? ಮಧ್ಯಂತರ ವರದಿ ಕೇಳುತ್ತಿರುವುದೇಕೆ? ಎಂದರು.

ಬಿಜೆಪಿ ಸಂವಿಧಾನ ವಿರೋಧಿ

ಬಿಜೆಪಿ ಸಂವಿಧಾನ ವಿರೋಧಿಯಾಗಿದ್ದು, ಇಡಿ, ಸಿಬಿಐ ಹಾಗೂ ಚುನಾವಣೆ ಆಯೋಗವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಈಗಾಗಲೇ ಮತಗಳ್ಳತನಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ ಅವರು ಅಭಿಯಾನ ಆರಂಭಿಸಿದ್ದಾರೆ. ಸುಪ್ರೀಂ ಕೋರ್ಟ್ ಸಹ 65 ಲಕ್ಷ ಮತಗಳನ್ನು ತೆಗೆದಿರುವ ಬಗ್ಗೆ ಮಾಹಿತಿ ಕೇಳಿದೆ. ಮಹದೇವಪುರ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಮತಗಳ್ಳತನಕ್ಕೆ ಸಂಬಂಧಿಸಿದಂತೆ ಪಕ್ಷದಿಂದ ರಾಹುಲ್ ಗಾಂಧಿ ಅವರಿಗೆ ವರದಿ ನೀಡಲಾಗಿದೆ. ಅದನ್ನಾಧರಿಸಿ ಅಭಿಯಾನ ಆರಂಭಗೊಂಡಿದ್ದು, ಈ ಅಭಿಯಾನ ಜನರ ಮನೆ ಬಾಗಿಲಿಗೆ ತಲುಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಸೊರಕೆ ಹೇಳಿದರು.

ಸಂವಿಧಾನದ ಆಶಯವೇ ಸಮಾನತೆ, ಸಮಾಜವಾದ ಮತ್ತು ಜಾತ್ಯತೀತವಾಗಿದೆ. ಆದರೆ, ಬಿಜೆಪಿ ಸಮಾಜವಾದ ಮತ್ತು ಜಾತ್ಯತೀತ ಪದವನ್ನೇ ಅಳಿಸಿ ಹಾಕಲು ಹೊರಟಿದೆ. ತುರ್ತು ಪರಿಸ್ಥಿತಿ ಸಂದರ್ಭ ಜನ ಸಾಮಾನ್ಯರಿಗೆ ಅಷ್ಟೇನೂ ತೊಂದರೆಯಾಗಿಲ್ಲ. ಬದಲಾಗಿ ಜನರ ಅಭಿವೃದ್ಧಿಯೇ ಆಯಿತು. ಆದರೆ ಈಗ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ ಎಂದು ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಕಾರ್ಯಕ್ರಮ ಪ್ರಚಾರ

ಬಿಜೆಪಿಯ ಸುಳ್ಳು ಭರವಸೆಗಳು ಹಾಗೂ ಕಾಂಗ್ರೆಸ್‌ನ ಜನಪರ ಕಾರ್ಯಕ್ರಮಗಳ ಕುರಿತು ಜನಜಾಗೃತಿಗಾಗಿ ಮುಂಬೈ ಕರ್ನಾಟಕದ ಭಾಗದಲ್ಲಿ ಮೊದಲ ಬಾರಿಗೆ ಪ್ರವಾಸ ಹಮ್ಮಿಕೊಳ್ಳಲಾಗಿದೆ. ಗ್ಯಾರಂಟಿ ಯೋಜನೆಗಳು ಜನರ ಜೀವನ ಮಟ್ಟ ಸುಧಾರಿಸಿವೆ. ಕೇಂದ್ರ ಸರ್ಕಾರದ ವರದಿಯೇ ಹೇಳುವಂತೆ ತಲಾದಾಯದಲ್ಲಿ ಕರ್ನಾಟಕ ನಂ.1 ಸ್ಥಾನದಲ್ಲಿದೆ. ಅಭಿವೃದ್ಧಿ ಎಂದರೆ ಕೇವಲ ಭೌತಿಕ ಕಾಮಗಾರಿಗಳಲ್ಲ; ಮಾನವಸಂಪನ್ಮೂಲದ ಅಭಿವೃದ್ಧಿ ಸಹ ಅಭಿವೃದ್ಧಿಯೇ. ಹೀಗಾಗಿ ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್ ಕೈಗೊಂಡ ಕಾರ್ಯಕ್ರಮಗಳನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುವುದು. ಜೊತೆಗೆ ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಮಹ್ಮದ್‌ರಫೀಕ್ ಟಪಾಲ್ ಇಂಜಿನಿಯರ್, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಸರಫರಾಜ್ ಮಿರ್ದೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net