ಚಡಚಣ ಭಾಗದ ಜಮೀನುಗಳಿಗೆ ಏತ ನೀರಾವರಿ ಯೋಜನೆ ನೀರು ಹರಿವು

irrigation scheme water flow to the farms in the Chadchan area
ಚಡಚಣ ಭಾಗದ ಜಮೀನಿಗಳಿಗೆ ನೀರು ಹರಿಸಿದ್ದನ್ನು ಶಾಸಕ ವಿಠ್ಠಲ ಕಟಕಧೋಂಡ ಪರಿಶೀಲನೆ ನಡೆಸಿದರು. ತಹಸೀಲ್ದಾರ್ ಸಂಜಯ ಇಂಗಳೆ, ಯುಕೆಪಿ ಎಇಇ ಸೋನಾವಣೆ ಇತರರಿದ್ದರು.
Published on

ಚಡಚಣ: ಏತ ನೀರಾವರಿ ಯೋಜನೆಯ ಪ್ರಥಮ ಹಂತದಲ್ಲಿ ಚಡಚಣ ಭಾಗದ ಜಮೀನಿಗೆ ವಿವಿಧ ಔಟ್‌ಲೆಟ್‌ಗಳ ಮುಖಾಂತರ ನೀರು ಹರಿಸಲಾಗಿದೆ.

ಚಡಚಣ ಭಾಗಕ್ಕೆ ಯಾವುದೇ ನೀರಾವರಿ ಯೋಜನೆ ಬಂದರೂ ಅದು ಕಾರ್ಯರೂಪಕ್ಕೆ ಬರುವುದಿಲ್ಲ ಎನ್ನುವುದು ಈ ಭಾಗದ ಜನರ ನಂಬಿಕೆಯಾಗಿತ್ತು. ಚಡಚಣ ಏತ ನೀರಾವರಿ ಯೋಜನೆಯ ವಿಷಯದಲ್ಲಿಯೂ ರೈತರು ಇದೇ ಅಭಿಪ್ರಾಯವನ್ನು ಹೊಂದಿದ್ದರು. ಆದರೆ ಯೋಜನೆ ಅನುಷ್ಠಾನಗೊಂಡು ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಶಾಸಕ ವಿಠ್ಠಲ ಕಟಕಧೋಂಡ ಅವರು ರೈತರ ಜಮೀನಿಗೆ ತೆರಳಿ ನೀರು ಹರಿಯುವುದನ್ನು ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದ್ದಾರೆ.

ಅಂದಾಜು 500 ಕೋಟಿ ರೂ. ವೆಚ್ಚದ ಚಡಚಣ ಏತ ನೀರಾವರಿ ಕಾಮಗಾರಿ 2013ರಲ್ಲಿ ಮಂಜೂರಾಗಿತ್ತು. ಆದರೆ, ಈ ಯೋಜನೆ ಮಂದಗತಿಯಲ್ಲಿ ಸಾಗಿ ಅಂದಾಜು 12 ವರ್ಷಗಳ ನಂತರ ಪ್ರಾಯೋಗಿಕವಾಗಿ ಕಾರ್ಯಾರಂಭಿಸಿದೆ.

ಈ ಯೋಜನೆಯಡಿ ಚಡಚಣದ 2720 ಹೆಕ್ಟೇರ್ ಜಮೀನು, ಹಾವಿನಾಳದ 1570 ಹೆಕ್ಟೇರ್, ಗೋಡಿಹಾಳದ 913 ಹೆಕ್ಟೇರ್, ಹಾಲಹಳ್ಳಿಯ 1301 ಹೆಕ್ಟೇರ್, ಬರಡೋಲದ 1924 ಹೆಕ್ಟೇರ್, ಶಿರಾಡೋಣದ 484 ಹೆಕ್ಟೇರ್, ರೇವತಗಾಂವದ 208 ಹೆಕ್ಟೇರ್ ಹಾಗೂ ನೀವರಗಿಯ 95 ಹೆಕ್ಟೇರ್ ಪ್ರದೇಶಕ್ಕೆ ನೀರು ಹರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಡಚಣ ತಹಸೀಲ್ದಾರ್ ಸಂಜಯ ಇಂಗಳೆ, ಯುಕೆಪಿ ಎಇಇ ಸೋನಾವಣೆ ಹಾಗೂ ಇಲಾಖೆಯ ಅಧಿಕಾರಿಗಳು ಇದ್ದರು.

ಚಡಚಣ ಭಾಗ ಯಾವಾಗಲೂ ಬರಗಾಲ ಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಆದರೆ, ಸದ್ಯ ರೈತರ ಜಮೀನಿನಲ್ಲಿ ನೀರು ಹರಿಯುತ್ತಿರುವುದನ್ನು ನೋಡಿ ಮನಸ್ಸಿಗೆ ನೆಮ್ಮದಿಯಾಗಿದೆ. ಇದು ಈ ಯೋಜನೆಯ ಪ್ರಾಯೋಗಿಕ ಹಂತವಾಗಿದ್ದು, ನೀರು ಹರಿಯುವಾಗ ಉಂಟಾಗುವ ಸಮಸ್ಯೆಗಳನ್ನು ಅಧಿಕಾರಿಗಳು ಇತ್ಯರ್ಥಪಡಿಸಲಿದ್ದಾರೆ. ಒಂದು ಔಟ್‌ಲೆಟ್ ಮುಖಾಂತರ ನಾಲ್ಕು ಜಮೀನುಗಳಿಗೆ ನೀರು ಹರಿಯಲಿದೆ. ಯಾವ ಔಟ್‌ಲೆಟ್‌ನಿಂದ ಯಾವ ರೈತರಿಗೆ ನೀರು ಸಿಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ವಿಠ್ಠಲ ಕಟಕಧೋಂಡ, ಶಾಸಕರು ನಾಗಠಾಣ ಚಡಚಣ ಏತ ನೀರಾವರಿಯಲ್ಲಿ ಸದ್ಯ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಈ ಯೋಜನೆಯಡಿ ಈಗಾಗಲೇ ರೈತರ ಜಮೀನುಗಳನ್ನು ಗುರುತಿಸಲಾಗಿದ್ದು, ಅವುಗಳಿಗೆ ನಿರ್ದಿಷ್ಟ ಔಟ್‌ಲೆಟ್‌ಗಳ ಮುಖಾಂತರ ನೀರು ಹರಿಸಲಾಗುವುದು. ನೀರು ಹರಿಯುವಾಗ ಕೆಲವೊಂದು ರೈತರಿಗೆ ಸಮಸ್ಯೆ ಆಗಬಹುದು. ರೈತರು ಸಹಕರಿಸಬೇಕು. ಜಿ.ಎ.ನಾಗರಾಳ ಇಇ ಯುಕೆಪಿ, ರಾಂಪೂರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net