

ಸದೇಶ್ ಕಾರ್ಮಾಡ್ ಮೈಸೂರು
ಶತಮಾನದ ಇತಿಹಾಸ ಹೊಂದಿರುವ ನಗರದ ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆ ಮರು ನಿರ್ಮಾಣಕ್ಕೆ ಸರ್ಕಾರ ಒಲವು ತೋರಿರುವ ಹಿನ್ನೆಲೆಯಲ್ಲಿ ಕಟ್ಟಡದ ಮುಂದಿನ ಭವಿಷ್ಯ ಏನು ಎಂಬುದು ಇದೀಗ ಚರ್ಚೆಯ ವಿಷಯವಾಗಿದೆ.
ನಗರ ಪಾಲಿಕೆಯು ಈಗಾಗಲೇ ಕಟ್ಟಡವನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಿಸುವ ಕುರಿತು ತೀರ್ಮಾನ ಕೈಗೊಂಡಿದ್ದು, ಜಿಲ್ಲಾ ಪಾರಂಪರಿಕ ಸಮಿತಿ ಸಹ ನಗರ ಪಾಲಿಕೆಯ ತೀರ್ಮಾನಕ್ಕೆ ಸಹಮತ ವ್ಯಕ್ತಪಡಿಸಿದೆ. ಈ ಪಾರಂಪರಿಕ ಕಟ್ಟಡಗಳ ಅಳಿವು, ಉಳಿವು ಇದೀಗ ಸರ್ಕಾರದ ಕೈಯಲ್ಲಿದೆ.
ಲ್ಯಾನ್ಸ್‌ಡೌನ್ ಮತ್ತು ದೇವರಾಜ ಮಾರುಕಟ್ಟೆಯನ್ನು ನೆಲಸಮಮಾಡಿ ಪಾರಂಪರಿಕ ಶೈಲಿಯಲ್ಲಿ ಪುನರ್ ನಿರ್ಮಾಣ ಮಾಡಬೇಕು ಎಂಬ ನಗರ ಪಾಲಿಕೆ ಹಾಗೂ ಜಿಲ್ಲಾ ಪಾರಂಪರಿಕ ಸಮಿತಿಯ ತೀರ್ಮಾನವನ್ನು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ಕಟ್ಟಡಗಳ ನೆಲಸಮಕ್ಕೆ ಅನುಮತಿ ನೀಡುವ ಸಾಧ್ಯತೆಗಳು ಇವೆ.
ಲ್ಯಾನ್ಸ್‌ಡೌನ್ ಕಟ್ಟಡದಲ್ಲಿ ಯಾವುದೇ ವ್ಯಾಪಾರ ವಹಿವಾಟು ನಡೆಯದೆ ಕಟ್ಟಡ ಖಾಲಿ ಬಿದ್ದಿದೆ. ಒಂದುವೇಳೆ ಸರ್ಕಾರ ಕಟ್ಟಡವನ್ನು ಪುನರ್ ನಿರ್ಮಾಣ ಮಾಡುವ ತೀರ್ಮಾನ ಕೈಗೊಂಡಿದ್ದೇ ಆದಲ್ಲಿ ಈ ಕಟ್ಟಡದ ಪುನರ್ ನಿರ್ಮಾಣ ಕಾಮಗಾರಿಯನ್ನು ಸುಲಭವಾಗಿ ಕೈಗೊಳ್ಳಬಹುದು. ಲ್ಯಾನ್ಸ್‌ಡೌನ್ ಕಟ್ಟಡದ ಒಂದು ಭಾಗ 2012ರಲ್ಲಿ ಕುಸಿದು ಬಿದ್ದ ಸಂದರ್ಭದಲ್ಲಿಯೇ ಕಟ್ಟಡದಲ್ಲಿದ್ದ ಬಾಡಿಗೆದಾರರನ್ನು ತೆರವುಗೊಳಿಸಿ ಕಟ್ಟಡದ ಮುಂಭಾಗದಲ್ಲಿ ಬಾಡಿಗೆದಾರರಿಗೆ ಮಳಿಗೆ ನಿರ್ಮಾಣ ಮಾಡಿಕೊಡಲಾಗಿದ್ದು, ಅಲ್ಲಿಯೇ ವ್ಯಾಪಾರ ವಹಿವಾಟು ನಡೆಯುತ್ತಿದೆ. ಕಟ್ಟಡದ ಸಂರಕ್ಷಣೆ ಅಥವಾ ಮರು ನಿರ್ಮಾಣದ ವಿಚಾರದಲ್ಲಿ ಸರ್ಕಾರ ಕೈಗೊಳ್ಳುವ ಬದ್ಧರಾಗಲು ಲ್ಯಾನ್ಸ್‌ಡೌನ್ ಬಾಡಿಗೆದಾರರ ಸಂಘ ತೀರ್ಮಾನಿಸಿದೆ. ಹೀಗಾಗಿ ಲ್ಯಾನ್ಸ್‌ಡೌನ್ ಕಟ್ಟಡ ಪುನರ್ ನಿರ್ಮಾಣಕ್ಕೆ ಆಕ್ಷೇಪಗಳು ವ್ಯಕ್ತವಾಗುವ ಸಾಧ್ಯತೆಗಳು ಕಡಿಮೆ.
ಲ್ಯಾನ್ಸ್‌ಡೌನ್ ಕಟ್ಟಡದ ಮಾದರಿಯಲ್ಲಿ ದೇವರಾಜ ಮಾರುಕಟ್ಟೆಯನ್ನು ಕೆಡವಿ ಮರು ನಿರ್ಮಾಣ ಮಾಡುವುದು ಸುಲಭದ ವಿಚಾ ರವಲ್ಲ. ದೇವರಾಜ ಮಾರುಕಟ್ಟೆಯಲ್ಲಿ ಇಂದಿಗೂ ವ್ಯಾಪಾರ ವಹಿವಾಟು ನಡೆಯುತ್ತಿದೆ. ಅಲ್ಲಿನ ಬಾಡಿಗೆದಾರರನ್ನು ಮನವೊಲಿಸಿ ಅವರಿಗೆ ಕಟ್ಟಡದ ಮರು ನಿರ್ಮಾಣದ ಅನಿವಾರ್ಯತೆ ಅರ್ಥಮಾಡಿಸಿ ಮಳಿಗೆಗಳನ್ನು ತೆರವುಗೊಳಿಸಿ ನಂತರ ಕಟ್ಟಡವನ್ನು ನೆಲಸಮ ಮಾಡಬೇಕಾಗಿದೆ. ಕಟ್ಟಡ ಮರು ನಿರ್ಮಾಣವಾಗುವವರೆಗೆ ಅಲ್ಲಿನ ಬಾಡಿಗೆದಾರರು, ವರ್ತಕರಿಗೆ ವ್ಯಾಪಾರ ವಹಿವಾಟಿಗೆ ಪರ್ಯಾಯ ವ್ಯವಸ್ಥೆಯನ್ನು ನಿರ್ಮಾಣ ಮಾಡುವ ಅವಶ್ಯಕತೆ ಇದೆ. ಅಲ್ಲದೆ, ಕಟ್ಟಡ ನೆಲಸಮ ಮಾಡುವುದಕ್ಕೆ ಮೊದಲಿನಿಂದಲೂ ದೇವರಾಜ ಮಾರು ಕಟ್ಟೆ ಬಾಡಿಗೆದಾರರು ಹಾಗೂ ವರ್ತಕರು ವಿರೋಧ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಸರ್ಕಾರ ಕೈಗೊಳ್ಳುವ ತೀರ್ಮಾನದ ಆಧಾರದ ಮೇಲೆ ಮುಂದಿನ ಹೋರಾಟವನ್ನು ರೂಪಿಸಲು ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ ತೀರ್ಮಾನಿಸಿದೆ.\
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡ ನವೀಕರಣ ಅಥವಾ ಪುನರ್ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ 13-4-2022 ರಂದು ನಡೆದ ಜಿಲ್ಲಾ ಪಾರಂಪರಿಕ ಸಮಿತಿ ಸಭೆಯಲ್ಲಿ ಚರ್ಚಿಸಿ, ಈ ಎರಡು ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿರುವ ಹಿನ್ನೆಲೆಯಲ್ಲಿ ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ಸಾಮಗ್ರಿಗಳನ್ನು ಬಳಸಿಕೊಂಡು ಅದೇ ವಾಸ್ತುಶೈಲಿಯಲ್ಲಿ ಪುನರ್ ನಿರ್ಮಾಣ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದೆ. ಈ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ದಾಖಲಿಸಿದ ರಿಟ್ ಅರ್ಜಿ ಸಲ್ಲಿಕೆಯಾಗಿತ್ತು. ನ್ಯಾಯಾಲಯಕ್ಕೆ ಪಾರಂಪರಿಕ ಸಮಿತಿಯ ನಿರ್ಣಯವನ್ನು ಮನವರಿಕೆ ಮಾಡಿಕೊಡಲಾಗಿದ್ದು, ಈ ಹಿನ್ನೆಲೆಯಲ್ಲಿ ನ್ಯಾಯಾಲಯ 8-8-2023 ರಂದು ಪ್ರಕರಣವನ್ನು ವಜಾಗೊಳಿಸಿದೆ. ಈ ಹಿನ್ನೆಲೆಯಲ್ಲಿ ಈ ಎರಡು ಕಟ್ಟಡಗಳನ್ನು ನೆಲಸಮ ಗೊಳಿಸಿ ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡಲು ಅನುಮತಿ ಕೋರಿ ನವೆಂಬರ್‌ನಲ್ಲಿ ನಗರ ಪಾಲಿಕೆ ಪೌರಾಡಳಿತ ನಿರ್ದೇಶ ನಾಲಯಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯ ಹಂತದಲ್ಲಿದೆ.
ಶತಮಾನದ ಇತಿಹಾಸ ಹೊಂದಿರುವ ಪಾರಂಪರಿಕ ‘ಲ್ಯಾನ್ಸ್‌ಡೌನ್’ ಕಟ್ಟಡ 2012 ಆಗಸ್ಟ್ 23,24 ರಂದು ಸುರಿದ ಧಾರಾಕಾರ ಮಳೆಗೆ ಆ.25 ರಂದು ಸಂಜೆ 6ಕ್ಕೆ ಕಟ್ಟಡದ ಒಂದು ಭಾಗ ಕುಸಿದು ನಾಲ್ವರು ಮೃತಪಟ್ಟಿದ್ದರು. ಲ್ಯಾನ್ಸ್‌ಡೌನ್ ಕಟ್ಟಡದ ದಕ್ಷಿಣ ಭಾಗದ ಮೊದಲ ಮಹಡಿಯ ಕೊಠಡಿ ಸಂಖ್ಯೆ 10, 11 ಮತ್ತು ನೆಲಮಾಳಿಗೆಯ 17ರ ಮೇಲ್ಛಾವಣಿ ಕುಸಿದಿತ್ತು. 11 ಜನವರಿ 2015 ರಂದು ಲ್ಯಾನ್ಸ್‌ಡೌನ್ ಕಟ್ಟಡದ ಜತೆಗೆ ದುಸ್ಥಿತಿಯಲ್ಲಿದ್ದ ಶತಮಾನದ ಇತಿಹಾಸ ಹೊಂದಿರುವ ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯಕ್ಕೆ ಚಾಲನೆ ದೊರೆಯಿತು. ದೇವರಾಜ ಮಾರುಕಟ್ಟೆಯನ್ನು 9 ಕೋಟಿ ರೂ., ಲ್ಯಾನ್ಸ್‌ಡೌನ್ ಕಟ್ಟಡವನ್ನು 6 ಕೋಟಿ ರೂ.ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಕಾಮಗಾರಿ ಕೈಗೊಳ್ಳಲಾಯಿತು. ಆದರೆ, 28 ಆಗಸ್ಟ್ 2016 ರಂದು ದೇವರಾಜ ಮಾರುಕಟ್ಟೆ ಸಂರಕ್ಷಣಾ ಕಾರ್ಯ ಸಂದರ್ಭ ಕಟ್ಟಡದ ಒಂದು ಭಾಗ ಕುಸಿದು ಬಿತ್ತು. ಹೀಗಾಗಿ ಲ್ಯಾನ್ಸ್‌ಡೌನ್ ಹಾಗೂ ದೇವರಾಜ ಮಾರುಕಟ್ಟೆಯ ಅಭಿವೃದ್ಧಿ ಕಾರ್ಯವನ್ನು ಕೈ ಬಿಡಲಾಯಿತು.
ದೇವರಾಜ ಮಾರುಕಟ್ಟೆ ಹಾಗೂ ಲ್ಯಾನ್ಸ್‌ಡೌನ್ ಕಟ್ಟಡಗಳು ಸಂರಕ್ಷಣಾ ಕಾರ್ಯ ಕೈಗೊಳ್ಳಲು ಸಾಧ್ಯವಾಗದಷ್ಟು ದುಸ್ಥಿತಿಗೆ ತಲುಪಿ ರುವ ಹಿನ್ನೆಲೆಯಲ್ಲಿ ತಜ್ಞರ ಅಭಿಪ್ರಾಯದ ಪ್ರಕಾರ ಈ ಎರಡು ಕಟ್ಟಡಗಳನ್ನು ನೆಲಸಮಗೊಳಿಸಿ ಪಾರಂಪರಿಕ ಶೈಲಿಯಲ್ಲಿ ಮರು ನಿರ್ಮಾಣ ಮಾಡಲು ನಗರ ಪಾಲಿಕೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದ್ದು, ನವೆಂಬರ್ ತಿಂಗಳಿನಲ್ಲಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಪ್ರಸ್ತಾವನೆಗೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿದರೆ ಕಟ್ಟಡ ಮರು ನಿರ್ಮಾಣ ಕೈಗೊಳ್ಳಲಾಗುವುದು.
ಅಸಾದ್ ಉರ್ ರೆಹಮಾನ್ ಷರೀಫ್, ನಗರ ಪಾಲಿಕೆ ಆಯುಕ್ತ
ದೇವರಾಜ ಮಾರುಕಟ್ಟೆಯ ವಿಚಾರವಾಗಿ ನ್ಯಾಯಾಲಯ ನೀಡಿರುವ ತೀರ್ಪು ಇನ್ನೂ ನಮ್ಮ ಕೈ ಸೇರಿಲ್ಲ. ತೀರ್ಪನ್ನು ನೋಡಿ ಮುಂದಿನ ಕ್ರಮ ವಹಿಸಲಾಗುವುದು. ಕಟ್ಟಡದ ವಿಚಾರದಲ್ಲಿ ಸರ್ಕಾರ ಏನು ತೀರ್ಮಾನ ಕೈಗೊಳ್ಳಲಿದೆ ಎಂದು ಕಾದು ನೋಡುತ್ತೇವೆ. ಒಂದುವೇಳೆ ಸರ್ಕಾರ ಕಟ್ಟಡವನ್ನು ನೆಲಸಮ ಮಾಡುವ ನಿರ್ಧಾರ ಪ್ರಕಟಿಸಿದರೆ ಹೋರಾಟದ ಹಾದಿ ತುಳಿಯಲಾಗುವುದು.
ಮಹದೇವ್, ಅಧ್ಯಕ್ಷ, ದೇವರಾಜ ಮಾರುಕಟ್ಟೆ ಬಾಡಿಗೆದಾರರ ಸಂಘ
ಲ್ಯಾನ್ಸ್‌ಡೌನ್ ಕಟ್ಟಡ ಒಂದು ವರ್ಷದಿಂದ ನಿರ್ವಹಣೆ ಇಲ್ಲದೆ ಮಳೆ ಗಾಳಿಗೆ ಸಿಲುಕಿ ನಲುಗಿದೆ. ಈ ಕಟ್ಟಡವನ್ನು ಉಳಿಸಿಕೊಳ್ಳಲು ನಾವು ಸಾಕಷ್ಟು ಹೋರಾಟಗಳನ್ನು ನಡೆಸಿದರೂ ಪ್ರಯೋಜವಾಗಿಲ್ಲ. ಕಟ್ಟಡದ ವಿಚಾರದಲ್ಲಿ ಸರ್ಕಾರ ಅದಷ್ಟು ಬೇಗ ಯಾವುದಾದರು ಒಂದು ಸ್ಪಷ್ಟ ತೀರ್ಮಾನಕ್ಕೆ ಬರುವುದು ಉತ್ತಮ. ಸರ್ಕಾರ ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ನಾವು ಬದ್ಧರಾಗಿರುತ್ತೇವೆ.
ಆರ್. ಮೂರ್ತಿ, ಅಧ್ಯಕ್ಷ, ಲ್ಯಾನ್ಸ್‌ಡೌನ್ ಮಾರುಕಟ್ಟೆ ಬಾಡಿಗೆದಾರರ ಸಂಘ