

ಬೆಂಗಳೂರು ದೆಹಲಿಯಲ್ಲಿರುವ ಸಂಸತ್ ಭವನವನ್ನು ನೇರವಾಗಿ ನೋಡಲು ಸಾಧ್ಯವಾಗದ ಹಾಗೂ ಬಾಬಾಸಾಹೇಬ್ ಅಂಬೇಡ್ಕರ್ ಜೀವನ ಸಾಧನೆ, ದೇಶಕ್ಕೆ ನೀಡಿದ ಕೊಡುಗೆ, ಸಾಮಾಜಿಕ ನ್ಯಾಯಕ್ಕಾಗಿ ಹೋರಾಟದಂತಹ ಮಹತ್ವದ ವಿಚಾರಧಾರೆಗಳನ್ನು ತಿಳಿಯಬೇಕೆಂಬ ‘ಹೂ’ ಮನಸಿಗರ ಆಶಯವು ಲಾಲ್‌ಬಾಗ್‌ನಲ್ಲಿ ‘ಫಲ’ಪ್ರದವಾಯಿತು.
ಸ್ವಾತಂತ್ರೋತ್ಸವದ ಅಂಗವಾಗಿ ತೋಟಗಾರಿಕಾ ಇಲಾಖೆಯು ಲಾಲ್‌ಬಾಗ್‌ನಲ್ಲಿರುವ ಗಾಜಿನ ಮನೆಯಲ್ಲಿ ಆಯೋಜಿಸಿರುವ 216ನೇ ಫಲಪುಷ್ಪ ಪ್ರದರ್ಶನಕ್ಕೆ ಗುರುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ, ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿ ಹಲವು ಗಣ್ಯರು ಚಾಲನೆ ನೀಡಿದರು. ಬಳಿಕ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹೂಗಳಲ್ಲಿ ರಚನೆಯಾಗಿರುವ ಸಂಸತ್ ಭವನ, 12 ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಹಾಗೂ ಅವರ ಜೀವನದ ಪ್ರಮುಖ ಘಟ್ಟಗಳನ್ನು ಕಣ್ತುಂಬಿಕೊಂಡರು.
30 ಲಕ್ಷ ಹೂಗಳ ಬಳಕೆ:
ಕರ್ನಾಟಕ ಸೇರಿ ವಿವಿಧ ರಾಜ್ಯಗಳಿಂದ ಹಲವು ತಳಿಗಳ ಸುಮಾರು 30 ಲಕ್ಷ ಹೂಗಳನ್ನು ಈ ಪುಷ್ಪ ಪ್ರದರ್ಶನದಲ್ಲಿ ಬಳಸಲಾಗಿದೆ. ಪ್ರದರ್ಶನಕ್ಕೆ ಸುಮಾರು 12 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಗುರುವಾರ ಆರಂಭವಾದ ಲಪುಷ್ಪ ಪ್ರದರ್ಶನವು ಇದೇ ತಿಂಗಳ 19ರವರೆಗೆ ನಡೆಯಲಿದೆ. ಆರಂಭಿಕ ದಿನದಲ್ಲಿ ನೋಡುವುದರಿಂದ ಆಕರ್ಷಕವಾಗಿರುತ್ತದೆ ಎಂದು ಸಾವಿರಾರ ಸಂಖ್ಯೆಯಲ್ಲಿ ಆಗಮಿಸಿದ್ದರು. ಹೂಗಳಲ್ಲಿ ತುಂಬಾ ಅದ್ಭುತವಾಗಿ ಸಂವಿಧಾನದ ಆಶಯಗಳು, ಪ್ರಜಾಪ್ರಭುತ್ವ ವ್ಯವಸ್ಥೆ, ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಲ್ಲಿ ಅಂಬೇಡ್ಕರ್ ಪಾತ್ರದ ವಿಚಾರಧಾರೆಗಳನ್ನು ನೋಡಿ ವೀಕ್ಷಕರು ಫಿದಾ ಆಗಿದ್ದಾರೆ.
32 ಅಡಿ ಎತ್ತರದ ಸಂಸತ್ ಭವನ:
ಕೆಂಪು ಮತ್ತು ಕಿತ್ತಳ ಬಣ್ಣದ 1.8 ಲಕ್ಷ ಗುಲಾಬಿ ಹೂಗಳು ಮತ್ತು ಬಿಳಿ, ಪಿಂಕ್ ಮತ್ತು ಹಳದಿ ಬಣ್ಣದ 1.2 ಲಕ್ಷ ಸೇವಂತಿಗೆ ಹೂಗಳಿಂದ ಆಕರ್ಷಕವಾಗಿ ಸಂಸತ್ ಭವನವನ್ನು ನಿರ್ಮಿಸಲಾಗಿದೆ. 32 ಅಡಿ ಎತ್ತರ ಮತ್ತು 12 ಅಡಿ ಅಗಲವಿದೆ. ಮೇಲ್ಭಾಗದಲ್ಲಿ 5 ಅಡಿ ಎತ್ತರದ ಅಶೋಕ ಲಾಂಛನವು ರಾರಾಜಿಸುತ್ತಿದೆ.
ಅಂಬೇಡ್ಕರ್ ವ್ಯಕ್ತಿತ್ವ, ಸಾಧನೆ ಬಿಬಿಸುವ ಕಲಾಕೃತಿಗಳು:
ಮಧ್ಯಪ್ರದೇಶದ ಮಹೌನಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಅವರ ಜನ್ಮಭೂಮಿ ಪುಷ್ಪಮಾದರಿಯನ್ನು ಗಾಜಿನ ಮನೆಯ ಎಡಭಾಗದಲ್ಲಿ ನಿರ್ಮಿಸಲಾಗಿದೆ. ಸಂಸತ್ ಭವನದ ಹಿಂಬದಿಯಲ್ಲಿ ಂಬೇಡ್ಕರ್ ಹೋರಾಟದ ಬದುಕಿನ ಆರಂಭದಲ್ಲಿಯೇ ನಡೆದ ಮಹಾಡ್ ಸತ್ಯಾಗ್ರಹ ನೆನಪಿಸುವ ಕಲಾಕೃತಿ ಇಡಲಾಗಿದೆ.
ಆ ನಂತರ ಅಂಬೇಡ್ಕರ್ ಸಾಮಾಜಿಕ ಹೋರಾಟದ ಹಾದಿಯನ್ನು ಸಾಂಕೇತಿಸುವ ನಾಸಿಕ್ ಕಲಾರಾಮ್ ದೇವಾಲಯ ಪ್ರವೇಶವನ್ನು ಬಿಂಬಿಸುವ ಕಲಾಕೃತಿ ವೀಕ್ಷಕರ ಗಮನ ಸೆಳೆಯುತ್ತಿದೆ. ಹಾಗೆಯೇ ಮುಂದೆ ಸಾಗಿದಂತೆ ಮಹಾರ್ ಸೈನಿಕರ ಯಶೋಗಾಥೆಯನ್ನು ನೆನಪಿಸುವ ಪುಣೆ ಸಮೀಪದ ಕೋರೆಗಾಂವ್ ಜಯಸ್ತಂಭದ ಮಾದರಿ ಇದೆ.
ಬ್ರಿಟಿಷ್ ಭಾರತದಲ್ಲಿ ಅಂಬೇಡ್ಕರ್ ಕೊಡುಗೆಯಾಗಿದ್ದ ಹಿರಾಕುಡ್ ಅಣೆಕಟ್ಟೆ, ಅಂಬೇಡ್ಕರ್ ತಂದೆ-ತಾಯಿ, ಪ್ರೇರಕ ಶಕ್ತಿಯಾಗಿದ್ದ ಬುದ್ಧ, ಸಂತ ಕಬೀರ ಮತ್ತು ಜ್ಯೋತಿ ಬಾಪುಲೆ ದಂಪತಿಗಳ ಪ್ರತಿಮೆಗಳನ್ನು ನಿರ್ಮಿಸಲಾಗಿದೆ.
ವೀಕ್ಷಕರನ್ನು ಕೂಲ್ ಮಾಡುವ ಫಾಗರ್ಸ್:
ಗಾಜಿನ ಮನೆಗೆ ಭೇಟಿ ನೀಡುವ ವೀಕ್ಷಕರಿಗೆ ಮಂಜಿನ ವಾತಾವರಣವನ್ನು ಉಂಟು ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಇಸ್ರೇಲಿನ ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿದ ವ್ಯವಸ್ಥಿತ ‘ಮಿಸ್ಟಿಂಗ್ ಸಿಸ್ಟಂ’ ಅನ್ನು ಅಳವಡಿಸಲಾಗಿದೆ.
ಪ್ರವೇಶ ಶುಲ್ಕದ ವಿವರ
ಸಾಮಾನ್ಯ ದಿನಗಳಲ್ಲಿ ವಯಸ್ಕರಿಗೆ 80 ರೂ., ಶನಿವಾರ ಮತ್ತು ಭಾನುವಾರ 100 ರೂ. ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. 12 ವರ್ಷದೊಳಗಿನ ಮಕ್ಕಳಿಗೆ ಎಲ್ಲ ದಿನಗಳಲ್ಲಿಯೂ 30 ರೂ. ನಿಗದಿ ಮಾಡಲಾಗಿದೆ. ಶಾಲಾ ಸಮವಸ ಧರಿಸಿ ಬರುವ 10ನೇ ತರಗತಿಯೊಳಗಿನ ಎಲ್ಲ ಮಕ್ಕಳಿಗೂ ಉಚಿತ ಪ್ರವೇಶವಿರುತ್ತದೆ.