ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಧು ಬಂಗಾರಪ್ಪ ಪ್ರತಿಕ್ರಿಯೆ ಏನು?

minister madhu bangarappa
ಶಿಕ್ಷಣ ಸಚಿವ ಮಧು ಬಂಗಾರಪ್ಪ
Published on

ಮೈಸೂರು: ಸಹೋದರ ಕುಮಾರ್ ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ವಿಚಾರದ ಪ್ರಶ್ನೆಗೆ ಮಧು ಬಂಗಾರಪ್ಪ ಸಿಡಿಮಿಡಿಗೊಂಡರು.

‘ನಾನು ಆ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ನನ್ನಿಂದ ಯಾವುದೇ ಉತ್ತರ ನಿರೀಕ್ಷೆ ಮಾಡಬೇಡಿ, ಅದೇ ನನ್ನ ಉತ್ತರ. ಬೇರೆ ಯಾವುದರ ಬಗ್ಗೆಯಾದರೂ ಕೇಳಿ ಹೇಳುತ್ತೇನೆ’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸರ್ವ ಶಿಕ್ಷಣ ಅಭಿಯಾನದಡಿ ಅನುದಾನ ನೀಡುವ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಅನ್ಯಾಯವಾಗಿದೆ. ಕೇಂದ್ರ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ., ದೇವರಂತಹ ಮಕ್ಕಳಿಗೆ ನೀಡಬೇಕಾಗಿರುವ ಹಣವನ್ನೂ ನೀಡಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಪ್ರತಿ ಮಗುವಿಗೂ ಸರಾಸರಿ 5,500 ರೂ. ನೀಡಬೇಕು. ಆಯಾಯ ರಾಜ್ಯಕ್ಕೆ ಅನುಗುಣವಾಗಿ ಶೇಕಡ 10-15ರಷ್ಟು ವ್ಯತ್ಯಾಸ ಇರುತ್ತದೆ. ಆದರೆ ನಮ್ಮ ರಾಜ್ಯಕ್ಕೆ ಪ್ರತಿ ಮಗುವಿಗೆ 2400 ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಇದರ ವಿರುದ್ಧ ನಾನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದೇನೆ. ಆದರೆ, ಈ ಬಗ್ಗೆ ಚರ್ಚೆಗೆ ಇದುವರೆಗೂ ಅವಕಾಶ ಕೊಟ್ಟಿಲ್ಲ ಎಂದರು.

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳೇ ನಮ್ಮ ಟ್ರಂಪ್‌ಕಾರ್ಡ್ ಆಗಿದೆ. ಎಲ್ಲ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಎಲ್ಲ ಗ್ಯಾರಂಟಿಗಳು ಜನರಿಗೆ ತಲುಪುತ್ತಿವೆ. ಲೋಕಸಭಾ ಚುನಾವಣೆಯಲ್ಲೂ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಕೊಂಡು ಮತ ಯಾಚನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳು ಕಾಂಗ್ರೆಸ್ ಕೈ ಹಿಡಿಯುವ ವಿಶ್ವಾಸವಿದೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net