ಸೋಮವಾರಪೇಟೆ: ಪ್ರಧಾನಿ ನರೇಂದ್ರ ಮೋದಿ ಉಳಿದರೆ ಮಾತ್ರ ದೇಶ ಉಳಿಯುತ್ತೆ. ಮೋದಿ ಮತ್ತೊಮ್ಮೆ ಪ್ರಧಾನಿಯಾಗಲು ಎಲ್ಲ ಜನಾಂಗದವರು ಮತ ನೀಡಬೇಕೆಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಹೇಳಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಒಕ್ಕಲಿಗರ ಸಂಘ ಹಾಗೂ ಕೊಡಗು ಗೌಡ ಸಂಘದವರೊಂದಿಗೆ ಚರ್ಚೆ ಮಾಡಿ, ಕಾಂಗ್ರೆಸ್‌ನ ಲೋಕಸಭಾ ಚುನಾವಣೆಯ ಅಭ್ಯರ್ಥಿ ಲಕ್ಷ್ಮಣ್ ಅವರಿಗೆ ಮತ ಚಲಾಯಿಸುವಂತೆ ಮನವಿ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಮಾತ್ರ ಒಕ್ಕಲಿಗರು ಮತ್ತು ಗೌಡರು ಜ್ಞಾಪಕಕ್ಕೆ ಬಂದಿದ್ದಾರೆ. ಲಕ್ಷ್ಮಣ್ ಒಕ್ಕಲಿಗ ಸಮುದಾಯಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ? ನಾವೇಕೆ ಅವರಿಗೆ ಮತ ನೀಡಬೇಕು? ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ವಾಲ್ನೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತ ನಮ್ಮ ಸಮುದಾಯದ ವ್ಯಕ್ತಿಯೊಬ್ಬರ ಮೇಲೆ ಅನ್ಯ ಕೋಮಿನವರು ಕಾರು ಹತ್ತಿಸಿ ಕೊಲೆ ಮಾಡಿದ್ದಾರೆ. ಇಂತಹ ಸಂದರ್ಭ ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್, ಲಕ್ಷ್ಮಣ್ ಅವರು ಬಂದು ಸಾಂತ್ವಾನ ಹೇಳಲಿಲ್ಲ. ಪರಿಹಾರ ರೂಪದಲ್ಲಿ ಹಣವನ್ನು ಕೊಡಲಿಲ್ಲ. ಬಿಜೆಪಿಯ ಸಿ.ಟಿ.ರವಿ ಅವರು ಬಂದು ಸಾಂತ್ವನ ಹೇಳಿದ್ದಾರೆ. ಪಕ್ಷದ ವತಿಯಿಂದ 10 ಲಕ್ಷ ರೂ.ಗಳನ್ನು ಮೃತ ಕುಟುಂಬಕ್ಕೆ ಹಾಗೂ ಗಾಯಾಳುಗಳಿಗೆ 2ಲಕ್ಷ ರೂ.ಗಳನ್ನು ನೀಡುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಕೃಷಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರತ್‌ಚಂದ್ರ ಮಾತನಾಡಿ, ಒಕ್ಕಲಿಗರು ಕೃಷಿಕರಾಗಿದ್ದಾರೆ. ಒಕ್ಕಲಿಗರ ಮುಗ್ಧತೆಯನ್ನು ಕಾಂಗ್ರೆಸ್ ದುರುಪಯೋಗಪಡಿಸಿಕೊಳ್ಳುತ್ತಿದೆ. ರಾಷ್ಟ್ರದ ಸುಭದ್ರತೆಗಾಗಿ ದುಡಿಯುತ್ತಿರುವ ಬಿಜೆಪಿ ಪಕ್ಷಕ್ಕೆ ಒಕ್ಕಲಿಗರು ಮತ ನೀಡಲಿದ್ದಾರೆ ಎಂದು ಹೇಳಿದರು.
ಒಕ್ಕಲಿಗರ ಯುವ ವೇದಿಕೆಯ ಜಿಲ್ಲಾಧ್ಯಕ್ಷ ಗಿರೀಶ್ ಮಲ್ಲಪ್ಪ ಮಾತನಾಡಿ, ಚುನಾವಣೆ ಸಂದರ್ಭ ಜಾತಿ ತರುವುದು ಸರಿಯಲ್ಲ. ಮತದಾರರು ವಿವೇಚನೆಯಿಂದ ಮತ ಚಲಾಯಿಸಬೇಕು. ಸರ್ಕಾರ ಫ್ರೀ ಕೊಡುವುದನ್ನು ನಿಲ್ಲಿಸಬೇಕು. ಉಚಿತ ಸೌಲಭ್ಯಗಳನ್ನು ನೀಡುತ್ತ ಹೋದರೆ ದೇಶ ದಿವಾಳಿಯಾಗುತ್ತದೆ. ಉಚಿತ ಆರೋಗ್ಯ ಮತ್ತು ಶಿಕ್ಷಣ ನೀಡಿದರೆ ಸಾಕು ಎಂದು ಹೇಳಿದರು.
ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಜೀವನ್, ಕಾರ್ಯಕರ್ತ ಗೌಡಳ್ಳಿ ಪೃಥ್ವಿ ಇದ್ದರು.