

ಕಳಸ: ಶ್ರೀಚಂದ್ರನಾಥ ಸ್ವಾಮಿ ಬಸದಿ ಮತ್ತು ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿ ಪಂಚಕಲ್ಯಾಣ ಮಹೋತ್ಸವದ ಎರಡನೇ ದಿನ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.
ಬೆಳಗ್ಗೆಯಿಂದಲೇ ಅಗ್ರೋದಕ ತರುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾದವು. ಶ್ರೀ ಚಂದ್ರನಾಥ ಸ್ವಾಮಿಗೆ ಪಂಚಾಮೃತ ಅಭಿಷೇಕ, ಹೋಮ, ಶ್ರೀ ಚಂದ್ರನಾಥ ಜಿನರ ಮತ್ತು ಪಾರ್ಶ್ವನಾಥ ಜಿನರ ಜನ್ಮ ಕಲ್ಯಾಣ, ಲಘು ಜನ್ಮಾಭಿಷೇಕ, ಜಿನ ಬಾಲಕರ ವಿಹಾರ.ಅಷ್ಟದಿಕ್ಷು ಧಾಮ ಸಂಪ್ರೋಕ್ಷಣೆ, ಕ್ಷೇತ್ರಪಾಲ ದೇವರ ಆರಾಧನ ಪೂರ್ವಕ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ,ಪಾಂಡುಕಾ ಶಿಲೆಯಲ್ಲಿ ಶ್ರೀ ಚಂದ್ರನಾಥ ಮತ್ತು ಪಾರ್ಶ್ವನಾಥ ಜಿನ ಬಾಲಕರಿಗೆ ಜನ್ನಾಭಿಷೇಕ, ಕಂಕಣ ಬಂಧನ, ಧ್ವಜಕಟ್ಟೆಯಲ್ಲಿ ಪೂಜೆ, ನಾಗಾರಾಧನೆ ಪೂರ್ವಕ ನಾಗಪ್ರತಿಷ್ಠೆ, ಆಶ್ಲೇಷ ಬಲಿ, ವಟು ಆರಾಧನೆ, ಸುವಾಸಿನಿ ಪೂಜೆ, ಪ್ರಸನ್ನಪೂಜೆ, ಯಾಗ ಮಂಡಲ ಆರಾಧನೆ, ಧ್ವಜ ಮರ ಪೂಜೆ, ಚಂದ್ರನಾಥ ಮಹಾರಾಜರ ಪಟ್ಟಾಭಿಷೇಕ, ಪಾರ್ಶ್ವನಾಥರ ಯುವರಾಜ ಪಟ್ಟಾಭಿಷೇಕ, ರಾಜ್ಯಭಾರ, 56 ದೇಶದ ರಾಜರಿಂದ ಕಪ್ಪಕಾಣಿಕೆ ಸಲ್ಲಿಕೆ ಮುಂತಾದ ಕಾರ್ಯಕ್ರಮಗಳು ನಡೆಯಿತು.
ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮೂಡಬಿದ್ರೆ ಚಾರುಕೀರ್ತಿ ಭಟ್ಟಾರಕ ಸ್ವಾಮಿಜಿ ಮಾತನಾಡಿ, ಜೈನ ಧರ್ಮದಲ್ಲಿ ನೀವು ನೀವಾಗಿರುವುದಲ್ಲ ನೀವು ನಾವಾಗಿ ಭಗವಂತ ಹೇಳುತ್ತಾನೆ ಇದು ಯಾವ ಧರ್ಮದಲ್ಲೂ ಇಲ್ಲ. ಒಬ್ಬ ವೈದ್ಯನ ಕೆಲಸವನ್ನು , ಒಬ್ಬ ಮನಶಾಸ್ತ್ರಜ್ಞಾನ ಕೆಲಸವನ್ನು ಒಂದು ಬಸದಿ ಮಾಡುತ್ತದೆ. ಬಸದಿಯಲ್ಲಿ ಇರುವುದು ಕೇವಲ ಮೂರ್ತಿಯಲ್ಲ ಅದು ಜೀವಂತ ಭಗವಂತ. ಪಂಚಕಲ್ಯಾಣಕ್ಕೆ ಹೋದರೆ ಮನೆಯಲ್ಲಿ ಸುಖ-ಶಾಂತಿ ನೆಮ್ಮದಿ ಸಿಗುತ್ತದೆ ಎಂದು ಹೇಳಿದರು.
ಬಸದಿಯ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೆ.ಸಿ.ಧರಣೇಂದ್ರಯ್ಯ, ಧರ್ಮಸ್ಥಳದ ಹರ್ಷೇಂದ್ರ ಹೆಗ್ಗಡೆ, ಕಾಫಿ ಬೆಳೆಗಾರ ಕೆ.ಆರ್.ಪ್ರಭಾಕರ, ಕಳಸ ಗ್ರಾಪಂ ಅಧ್ಯಕ್ಷೆ ಸುನೀತ ಕುಮಾರಿ, ಶಾಂತಿಗಿರಿ ಬಸದಿಯ ಅಧ್ಯಕ್ಷ ಪದ್ಮರಾಜ, ತ್ರೈರತ್ನ ದಿಗಂಬರ ಜೈನ ಸಮಿತಿ ಅಧ್ಯಕ್ಷ ಸುಕುಮಾರ್, ರವಿಕೆಳಂಗಡಿ ಪಟ್ಟಣ ಶೆಟ್ಟರು ಇದ್ದರು.