ಬಿಜೆಪಿಗೆ ಜಿಲ್ಲಾಧ್ಯಕ್ಷ ವೀರೇಶ್ ಕೊಡುಗೆ ಏನು?

mkg1c
Published on

ಹೊನ್ನಾಳಿ: ವಿಧಾನಸಭಾ ಚುನಾವಣೆ ಮುನ್ನ ಮತ್ತು ನಂತರ ಬಿಜೆಪಿ ಜಿಲ್ಲಾಧ್ಯಕ್ಷ ವೀರೇಶ್ ಹನಗವಾಡಿ ಜಿಲ್ಲೆಯ ಯಾವ ತಾಲೂಕಿನ ಪೂರ್ವಭಾವಿ ಸಭೆ ಕರೆದು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಿದ್ದಾರೆ ಹಾಗೂ ಪಕ್ಷಕ್ಕೆ ಅವರ ಕೊಡುಗೆ ಏನು? ಎನ್ನುವುದನ್ನು ಸ್ಪಷ್ಟಪಡಿಸಲಿ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ವಿ. ಶ್ರೀಧರ್ ಸವಾಲು ಹಾಕಿದರು.

ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ಸಮುದಾಯ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ರೇಣುಕಾಚಾರ್ಯರ ಬಗ್ಗೆ ಹಗುರವಾಗಿ ಮಾತನಾಡುವ ಬಿಜೆಪಿ ಜಿಲ್ಲಾಧ್ಯಕ್ಷರು ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಆದರೆ, ಮಾಜಿ ಶಾಸಕ ರೇಣುಕಾಚಾರ್ಯರು ಗ್ರಾಮಾಂತರ ಪ್ರದೇಶದ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಪಕ್ಷ ಸಂಘಟನೆ ಮಾಡಿದ್ದರ ಪರಿಣಾಮ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಅಸ್ತಿತ್ವ ಬಂದಿದೆ ಎಂದು ತಿಳಿಸಿದರು.

ಪುರಸಭೆ ಮಾಜಿ ಅಧ್ಯಕ್ಷ ಬಾಬು ಹೋಬಳದಾರ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಿಲ್ಲೆಯ ಒಬ್ಬ ಶಾಸಕರನ್ನು ಮಂತ್ರಿ ಮಾಡಿ ಜಿಲ್ಲಾ ಉಸ್ತುವಾರಿಯನ್ನಾಗಿ ಮಾಡಬೇಕು ಎಂದು ರೇಣುಕಾಚಾರ್ಯರು ಒತ್ತಾಯಿಸಿದ್ದಾರೆ ಹೊರತು ಎಸ್.ಎ. ರವೀಂದ್ರನಾಥ ಅವರಿಗೆ ಮಂತ್ರಿಗಿರಿ ಕೊಡಬೇಡಿ ಎಂದು ಹೇಳಿಲ್ಲ. ಇದನ್ನು ಜಿಲ್ಲಾಧ್ಯಕ್ಷರು ಸೃಷ್ಟಿ ಮಾಡಿ ಹರಿಬಿಟ್ಟಿದ್ದಾರೆ ಎಂದರು.

ಪಪಂ ಮಾಜಿ ಸದಸ್ಯ ಪೇಟೆ ಪ್ರಶಾಂತ ಮಾತನಾಡಿ, ವೇದಿಕೆ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುವ ಜಿಲ್ಲಾಧ್ಯಕ್ಷ ವೀರೇಶ್ ಅವರು ತಕ್ಷಣ ಪದವಿಗೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಮುಖಂಡರಾದ ಮಂಜುನಾಥ ಇಂಚರ, ಸತೀಶ್, ಸರಳಿನಮನೆ ಮಂಜುನಾಥ್, ರಾಜುಗೌಡ ಹಿರೇಮಠ, ಚಂದ್ರು, ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net