

ಹೊನ್ನಾವರ: ತಾಲೂಕಿನಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಮನೆಗಳಿದ್ದಲ್ಲಿ ಅವನ್ನು ಹುಡುಕಿ ವಿದ್ಯುತ್ ಸಂಪರ್ಕ ನೀಡುವ ಕೆಲಸ ಆಗಬೇಕು. ಯಾವುದೇ ಇಲಾಖೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಕೂಡದು ಎಂದು ಸಚಿವ ಮಂಕಾಳ ವೈದ್ಯ ಹೆಸ್ಕಾಂ ಅಧಿಕಾರಿಗಳಿಗೆ ತಾಕೀತು ಮಾಡಿದರು.
ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಲೂಕಿನ ವಿವಿಧ ಭಾಗಗಳಲ್ಲಿ ವಿದ್ಯುತ್ ಬಿಲ್ ಬಾಕಿ ಇರುವ ಬಗ್ಗೆ ಸಭೆಯಲ್ಲಿ ಹೆಸ್ಕಾಂ ಅಧಿಕಾರಿಗಳು ವಿಷಯ ಪ್ರಸ್ತಾಪಿಸಿದರ. ಸಚಿವರು ಸಂಬಂಧಪಟ್ಟ ಇಲಾಖೆಗೆ ಬಿಲ್ ಪಾವತಿಸುವಂತೆ ಸೂಚಿಸಿ, ಯಾವುದೇ ಇಲಾಖೆಯ ವಿದ್ಯುತ್ ಸಂಪರ್ಕ ಕಡಿತಗೊಳಿಸಕೂಡದು ಎಂದು ಸೂಚಿಸಿದರು.
ಶಿಕ್ಷಣ ಇಲಾಖೆ ಚರ್ಚೆಯ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್. ನಾಯ್ಕ ಮಾತನಾಡಿ, 32 ಶಾಲೆಗಳಿಗೆ ಮಣ್ಣಿನ ಗೋಡೆ ಇದೆ. 51 ಶಾಲೆಗಳಿಗೆ ಕೊಠಡಿ ಅವಶ್ಯಕತೆ. ಶಿಕ್ಷಕರ ವೈದ್ಯಕೀಯ ವೆಚ್ಚ 50 ರೂ. ಲಕ್ಷ ಬಾಕಿ ಉಳಿದಿದೆ ಎಂದು ಮಾಹಿತಿ ನೀಡಿದರು. ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇ. 100 ರಷ್ಟಾಗಬೇಕು. ಶಿಕ್ಷಣಕ್ಕೆ ಯಾವುದೇ ಕೊರತೆ ಆಗದಂತೆ ಎಚ್ಚರ ವಹಿಸಬೇಕು ಎಂದು ಸಚಿವರು ಸೂಚಿಸಿದರು.
ಆರೋಗ್ಯ ಇಲಾಖೆಯ ಚರ್ಚೆಯಡಿ ಟಿಬಿ ತಪಾಸಣೆ ಶಿಬಿರ ನಡೆಸಲಾಗುತ್ತಿದೆ ಎಂದು ಇಲಾಖೆಯಲ್ಲಿನ ಕಾರ್ಯಚಟುವಟಿಕೆ ಕುರಿತು ತಾಲೂಕು ಆರೋಗ್ಯಾಧಿಕಾರಿ ಉಷಾ ಹಾಸ್ಯಗಾರ ತಿಳಿಸಿದರು. ಇದು ಒಂದು ದಿನಕ್ಕೆ ಸಿಮೀತವಾಗದೇ ನಿರಂತರವಾಗಿರಿಸಿ ಎಂದು ಸಚಿವರು ಸೂಚಿಸಿದರು.
ಕುಡಿಯುವ ನೀರಿನ ಚರ್ಚೆಯಲ್ಲಿ ಈ ಬಾರಿ ಟ್ಯಾಂಕರ್ನಲ್ಲಿ ನೀರು ಕೊಡುವ ಪರಿಸ್ಥಿತಿ ಇರಬಾರದು. ಜೆಜೆಎಂ ಕಾಮಗಾರಿ ಮಾರ್ಚ್ ಅಂತ್ಯದೊಳಗೆ ಮುಗಿಸಬೇಕು ಎಂದು ತಾಕೀತು ಮಾಡಿದರು. ಯುವಜನ ಸೇವಾ ಕ್ರೀಡಾ ಇಲಾಖೆಯಿಂದ 12 ಶಾಲೆಗಳಿಗೆ ಮಂಜೂರಾದ ಕ್ರೀಡಾ ಸಾಮಗ್ರಿಯನ್ನು ಸಚಿವರು ವಿತರಿಸಿದರು. ಕೃಷಿ, ಅರಣ್ಯ, ಪಶುಸಂಗೋಪನೆ, ಕಟ್ಟಡ ಕಾರ್ವಿುಕ, ಪೊಲೀಸ್, ಸಾರಿಗೆ, ಅಬಕಾರಿ, ಬಂದರು, ಶಿಶು ಅಭಿವೃದ್ಧಿ ಇಲಾಖೆ ಸೇರಿ ವಿವಿಧ ಇಲಾಖೆಗಳ ಕುರಿತು ಚರ್ಚೆ ನಡೆಯಿತು.
ಭಟ್ಕಳ ಉಪವಿಭಾಗಾಧಿಕಾರಿ ಡಾ.ನಯನಾ ಎಸ್., ಜಿಪಂ ಯೋಜನಾಧಿಕಾರಿ ವಿನೋದ ಅಣ್ವೇಕರ್, ತಹಸೀಲ್ದಾರ್ ಪ್ರವೀಣ ಕರಾಂಡೆ, ತಾಪಂ ಇಒ ಚೇತನಕುಮಾರ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕಾಧ್ಯಕ್ಷ ಅಣ್ಣಪ್ಪ ನಾಯ್ಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.