ಕಮಲ್ ಪರ ಶಿವಣ್ಣ ಕನ್ನಡಾಭಿಮಾನ ಅಡವಿಟ್ಟರೆ?: ಕರವೇ ಅಧ್ಯಕ್ಷ ನಾರಾಯಣಗೌಡ ಪ್ರಶ್ನೆ

Siddheshwar organization expresses anger against Mushrif
Shivasharane Hemaraddi Mallamma Jayanti
Published on

ಬೆಂಗಳೂರು: ಕನ್ನಡ ಭಾಷೆಯು ತಮಿಳಿನಿಂದ ಹುಟ್ಟಿದ್ದು ಎಂಬ ನಟ ಕಮಲ್ ಹಾಸನ್ ಹೇಳಿಕೆಯನ್ನು ಖಂಡಿಸದ ನಟ ಶಿವರಾಜಕುಮಾರ್ ಅವರ ನಡೆಗೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಅಧ್ಯಕ್ಷ ಟಿ.ಎ.ನಾರಾಯಣಗೌಡ ತೀವ್ರ ಅಸಮಾಧಾನವನ್ನು ಹೊರಹಾಕಿದ್ದಾರೆ. ಒಬ್ಬ ನಟನ ಮೇಲಿನ ಅಭಿಮಾನಕ್ಕಾಗಿ ಶಿವಣ್ಣ ಅವರು ಕನ್ನಡದ ಮೇಲಿನ ಅಭಿಮಾನವನ್ನು ಅಡವಿಟ್ಟುಬಿಟ್ಟರೇ ಎಂಬ ಪ್ರಶ್ನೆ ಉದ್ಭವಿಸಿದೆ ಎಂದು ಕರವೇ ಅಧ್ಯಕ್ಷರು ಪ್ರಶ್ನಿಸಿದ್ದಾರೆ.

ಕರ್ನಾಟಕದಾದ್ಯಂತ ಕನ್ನಡ ಚಳವಳಿಯ ಜ್ವಾಲೆ ಹೊತ್ತಿಸಿ ಕನ್ನಡಿಗರಲ್ಲಿ ಸ್ವಾಭಿಮಾನ ಬಡಿದೆಬ್ಬಿಸಿದ ಡಾ. ರಾಜ್‌ಕುಮಾರ್ ನಮಗೆ ಆದರ್ಶ. ಅವರ ಮಕ್ಕಳು, ಕುಟುಂಬಸ್ಥರಿಂದಲೂ ಅದನ್ನೇ ಬಯಸುತ್ತೇವೆ. ಅಣ್ಣಾವ್ರ ಮೇರು ನಟ ಅಷ್ಟೇ ಅಲ್ಲ, ಅವರು ಕನ್ನಡದ ಸಂಕೇತ. ಅಂತಹವರ ಮಗನಾಗಿ ಶಿವರಾಜ್‌ಕುಮಾರ್ ಅವರಿಂದ ನಮ್ಮ ನಿರೀಕ್ಷೆ ಬಹಳಷ್ಟಿದೆ. ಆದರೆ, ಕನ್ನಡವು ತಮಿಳಿನಿಂದ ಹುಟ್ಟಿತು ಎಂಬ ಕಪೋಲಕಲ್ಪಿತ, ವಿಕೃತ ಸುಳ್ಳನ್ನು ಕೇಳಿಯೂ ಶಿವಣ್ಣರಲ್ಲಿ ಸ್ವಾಭಿಮಾನದ ಮಾತುಗಳು ಬಾರದಿರುವುದು ಆಶ್ಚರ್ಯವಾಗುತ್ತದೆ. ಡಾ.ರಾಜ್‌ಕುಮಾರ್ ಅವರನ್ನು ಪ್ರೀತಿಸುವಷ್ಟೇ ನಾವು ಶಿವಣ್ಣರನ್ನೂ ಪ್ರೀತಿಸುತ್ತೇವೆ. ಕನ್ನಡದಿಂದ ನಾವೇ ಹೊರತು ನಮ್ಮಿಂದ ಕನ್ನಡವಲ್ಲ. ಇದನ್ನು ಶಿವಣ್ಣಗೆ ಅರ್ಥವಾಗಲಿ ಎಂದು ನಾರಾಯಣಗೌಡ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಯದುವೀರ್ ಕ್ಷಮೆಯಾಚಿಸಲಿ:

ಕಮಲ್ ಹಾಸನ್ ಹೇಳಿಕೆಗೆ ಪ್ರತಿಕ್ರಿಯಿಸುವ ಭರದಲ್ಲಿ ಸಂಸದ ಯದುವೀರ್ ಒಡೆಯರ್ ಅವರು ಕನ್ನಡ ಹುಟ್ಟಿದ್ದು ಸಂಸ್ಕೃತ ಮತ್ತು ಪ್ರಾಕೃತ ಭಾಷೆಗಳಿಂದ ಎಂಬುದಾಗಿ ಸುಳ್ಳು ಹೇಳಿದ್ದಾರೆ. ಭಾಷೆಗಳ ಉಗಮದ ಬಗ್ಗೆ ತಿಳಿವಳಿಕೆ ಇದ್ದವರು ಇಂತಹ ಮೂರ್ಖ ಹೇಳಿಕೆ ನೀಡಲು ಸಾಧ್ಯವಿಲ್ಲ. ಸಂಸ್ಕೃತವು ಎಲ್ಲ ಭಾರತಿಯ ಭಾಷೆಗಳ ತಾಯಿ ಎಂಬ ಕೆಲವರ ವಾದವನ್ನು ಯದುವೀರ್ ಪುನರುಚ್ಚಿಸಿದ್ದಾರೆ. ಕನ್ನಡದ ಬಗ್ಗೆ ತಪ್ಪು ಮಾಹಿತಿ ಹೇಳಿಕೆ ನೀಡಿರುವ ಯದುವೀರ್ ಕ್ಷಮೆಯಾಚಿಸಬೇಕು ಎಂದು ನಾರಾಯಣಗೌಡ ಆಗ್ರಹಿಸಿದರು.

ಕನ್ನಡವು ಸಂಸ್ಕೃತದಿಂದ ಉಗಮವಾಯಿತು ಅಥವಾ ತಮಿಳಿನಿಂದ ಹುಟ್ಟಿತು ಎಂಬ ಹೇಳಿಕೆ ರಾಜಕೀಯ ಪ್ರೇರಿತವಾಗಿವೆಯೇ ಹೊರತು ಐತಿಹಾಸಿಕ ಸತ್ಯ ಒಳಗೊಂಡಿಲ್ಲ. ಈ ಹೇಳಿಕೆಗಲು ಕನ್ನಡಗಿರ ನುಡಿ ಪರಂಪರೆ ಹಾಗೂ ಸಾಂಸ್ಕೃತಿಕ ಅಸ್ಮಿತೆಯನ್ನು ಕೆಡಿಸುವ ಉದ್ದೇಶ ಹೊಂದಿದೆ. ಭಾರತೀಯತೆಯಲ್ಲಿ ಹಾಸುಹೊಕ್ಕಾಗಿರುವ ಪ್ರಾದೇಶಿಕ ಭಿನ್ನತೆ, ಸಾಂಸ್ಕೃತಿಕ ಬಹುತ್ವವನ್ನು ತೊಡೆದುಹಾಕಲು ಈ ಸಾಂಸ್ಕೃತಿಕ ರಾಜಕಾರಣವನ್ನು ನಡೆಸಲಾಗುತ್ತಿದೆ. ಇದು ನಮ್ಮ ಪರಂಪರೆ ಮೇಲಿನ ದಾಳಿಯಾಗಿದ್ದು, ಇದನ್ನು ಕರವೇ ಎಂದಿಗೂ ಸಹಿಸುವುದಿಲ್ಲ ಎಂದು ನಾರಾಯಣಗೌಡ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net