ಮೈಸೂರಿನ ಅಭಿವೃದ್ಧಿಗಾಗಿ ಏನು ಮಾಡಿದ್ದೀರಿ; ಬಿಜೆಪಿಗೆ ಸಿಎಂ ಸವಾಲು

mysore
Published on

ಮೈಸೂರು: ಬಿಜೆಪಿಯವರು ಮೈಸೂರು ನಗರ ಅಭಿವೃದ್ಧಿಗಾಗಿ ಮಾಡಿರುವ ಒಂದೇ ಒಂದು ಕೆಲಸವನ್ನು ಹೇಳಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದರು.


ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಮೈಸೂರು ಅಭಿವೃದ್ಧಿ ಕೆಲಸಗಳು ಆಗಿವೆ. ನಂತರ ಬಂದ ಬಿಜೆಪಿಯವರು ಏನು ಮಾಡಲಿಲ್ಲ. ಮಹಾರಾಣಿ ವಿಜ್ಞಾನ ಕಾಲೇಜಿನ ಕಟ್ಟಡವೊಂದು ಕುಸಿದು ಹೋಯಿತು. ಹೊಸ ಕಟ್ಟಡ ಕಟ್ಟಿಸಲಿಲ್ಲ.

ಇದಕ್ಕೆ ಈಗ ನಾನು 56 ಕೋಟಿ ರೂ. ನೀಡಿದ್ದೇನೆ. ಮಹಾರಾಣಿ ಕಾಲೇಜಿನ ಹಾಸ್ಟೆಲ್‌ಗಾಗಿ 116 ಕೋಟಿ ರೂ. ಅನುದಾನ ಕೊಟ್ಟಿರುವೆ. ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣ, ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವದ ಅಂಗವಾಗಿ 95 ಕೋಟಿ ರೂ. ವೆಚ್ಚದಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ ಹೊರರೋಗಿಗಳ ವಿಭಾಗ(ಒಪಿಡಿ) ಕಟ್ಟಡ ನಿರ್ಮಿಸಲಾಗುತ್ತಿದೆ. ಬಿಜೆಪಿಯವರು ಏನು ಮಾಡಿದರು? ಎಂದು ಪ್ರಶ್ನಿಸಿದರು.


ಬಿಜೆಪಿಯವರು ಇಂತಹ ಕೆಲಸ ಮಾಡಿದ್ದೀವಿ ಎಂದು ಹೇಳಲಿ. ನಗರದಲ್ಲಿ ಒಂದೇ ಒಂದು ಗುರುತಿಸುವಂತಹ ಕೆಲಸ ಮಾಡಿದ್ದಾರೆಯೇ? ಏನು ಮಾಡಲಿಲ್ಲ ಎಂದು ಕಿಡಿಕಾರಿದರು.


ಲ್ಯಾನ್ಸ್‌ಡೌನ್ ಕಟ್ಟಡದ ಅಭಿವೃದ್ಧಿಗೆ ನಾನು ಸಿಎಂ ಆಗಿದ್ದಾಗ ಕ್ರಮ ತೆಗೆದುಕೊಂಡಿದ್ದೆ. ಬಳಿಕ ಬಂದ ಬಿಜೆಪಿ ಏನು ಮಾಡಲಿಲ್ಲ. 2024-25ನೇ ಬಜೆಟ್‌ನಲ್ಲಿ ಅದಕ್ಕಾಗಿ ಅನುದಾನ ಮೀಸಲಿಡಲಾಗಿದೆ. ಆದರೆ, 4 ವರ್ಷ 10 ತಿಂಗಳು ಬಿಜೆಪಿ ಸರ್ಕಾರ ಏನು ಮಾಡಿತು? ಬರೀ ಲೂಟಿ ಹೊಡೆಯುವ ಕೆಲಸ ಮಾಡಿತ್ತು. ರಾಜ್ಯಾದ್ಯಂತ ಲೂಟಿ ಹೊಡೆದು ಆರ್ಥಿಕ ದಿವಾಳಿ ಮಾಡಿ ರಾಜ್ಯವನ್ನು ಹಾಳು ಮಾಡಿತು ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net