

‘‘ನಗರ ಪಾಲಿಕೆಯ 65 ವಾರ್ಡ್‌ಗಳಿಗೆ 31 ಆಗಸ್ಟ್ 2018 ರಂದು ಚುನಾವಣೆ ನಡೆಯಿತು. ನವೆಂಬರ್ 17 ರಂದು ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು. ಅದೇ ದಿನ ಪಾಲಿಕೆ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಈ ಬಾರಿಯ ಕೌನ್ಸಿಲ್‌ನ ಅಧಿಕಾರಾವಧಿ ನ.16ಕ್ಕೆ ಮುಕ್ತಾಯಗೊಂಡಿದ್ದು, ಈ ಅವಧಿಯಲ್ಲಿ ನಗರದಲ್ಲಿ ಆದ ಅಭಿವೃದ್ಧಿ ಕಾರ್ಯಗಳು, ಪ್ರಮುಖ ತೀರ್ಮಾನಗಳು ಹಾಗೂ ಜಾರಿಯಾಗದೆ ಉಳಿದ ಪ್ರಮುಖ ಯೋಜನೆಗಳ ಕುರಿತು ಇಲ್ಲಿ ಬೆಳಕು ಚೆಲ್ಲಲಾಗಿದೆ’’
ಸದೇಶ್ ಕಾರ್ಮಾಡ್ ಮೈಸೂರು
ಕೋವಿಡ್ ಭೀತಿ ಹಾಗೂ ಸಕಾಲದಲ್ಲಿ ಮೇಯರ್ ಚುನಾವಣೆ ನಡೆಯದ ಹಿನ್ನೆಲೆಯಲ್ಲಿ ನಗರ ಪಾಲಿಕೆ ಸದಸ್ಯರಿಗೆ 5 ವರ್ಷಗಳ ಕಾಲ ಪೂರ್ಣ ಪ್ರಮಾಣದ ಆಡಳಿತ ನಡೆಸಲು ಸಾಧ್ಯವಾಗದೆ ಇದ್ದರೂ ಈ ಅವಧಿಯಲ್ಲಿ ಹಲವು ಮಹತ್ವದ ಅಭಿವೃದ್ಧಿ ಕಾರ್ಯಗಳು ಹಾಗೂ ತೀರ್ಮಾನಗಳಿಗೆ ನಗರ ಪಾಲಿಕೆ ಸಾಕ್ಷಿಯಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಎರಡು ವರ್ಷ ಅಭಿವೃದ್ಧಿ ಸಂಪೂರ್ಣ ಸ್ಥಗಿತಗೊಂಡಿತು. ಆ ಸಂದರ್ಭ ತೆರಿಗೆ ಸಂಗ್ರಹದಲ್ಲೂ ಗಣನೀಯ ಪ್ರಮಾಣದ ಕುಸಿತ ಕಂಡಿತು. ಕೋವಿಡ್ ಸಂಕಷ್ಟದಿಂದ ಹೊರ ಬಂದ ನಂತರ ತೆರಿಗೆ ಸಂಗ್ರಹ ಕಾರ್ಯ ಚುರುಕುಗೊಳಿಸಿ ಗುತ್ತಿಗೆದಾರ ರಿಗೆ ನೀಡಲು ಬಾಕಿ ಇದ್ದ ಬಿಲ್‌ಗಳನ್ನು ಸಂಪೂರ್ಣ ಪಾವತಿಸಿದ್ದು ನಗರ ಪಾಲಿಕೆಯ ಹೆಗ್ಗಳಿಕೆ. ತೆರಿಗೆ ಸಂಗ್ರಹಣೆ ವಿಚಾರದಲ್ಲಿ ಈ ಹಿಂದಿನ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ತೋರಿದ ಆಸಕ್ತಿಯಿಂದಲೇ ನಗರ ಪಾಲಿಕೆ ಸಾಕಷ್ಟು ಆದಾಯ ಗಳಿಸಿ ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸಾಧ್ಯವಾಯಿತು.
ನಗರದ ಕೆಸರೆಯಲ್ಲಿ 21.10 ಕೋಟಿ ರೂ.ವೆಚ್ಚದಲ್ಲಿ ಪೌರ ಕಾರ್ಮಿಕರಿಗೆ 158 ಗುಂಪು ಮನೆಗಳ ನಿರ್ಮಾಣಕ್ಕೆ ಚಾಲನೆ ದೊರೆಯಿ ತು, ಪೌರ ಕಾರ್ಮಿಕರಿಗೆ ಬೆಳಗ್ಗೆ ಉಪಹಾರ ನೀಡುವ ಯೋಜನೆಗೆ 2019ರಲ್ಲಿ ಚಾಲನೆ ದೊರೆತು ಉಪಹಾರ ಸರಿ ಇಲ್ಲ ಎಂಬ ಕಾರಣಕ್ಕೆ ಯೋಜನೆ ಸ್ಥಗಿಗೊಂಡಿತ್ತು. ಇದೀಗ ಮತ್ತೆ ಯೋಜನೆ ಕಾರ್ಯಾರಂಭಗೊಂಡಿದೆ. ನಗರದ ಹಲವೆಡೆ ‘ಪೌರಬಂಧು ವಿಶ್ರಾಂತಿ ಗೃಹ’ ನಿರ್ಮಾಣಗೊಂಡಿವೆ. ಪೌರ ಕಾರ್ಮಿಕರಿಗೆ ಬಯೋಮೆಟ್ರಿಕ್ ವ್ಯವಸ್ಥೆ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಯಿತು.
ನೀರಿನ ತೆರಿಗೆ ಮಾದರಿಯಲ್ಲಿ ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್ ವ್ಯವಸ್ಥೆ ಜಾರಿಗೆ ತರಲಾಯಿತು. ನಗರದ ಉದ್ಯಾನ ಹಾಗೂ ಸ್ಮಶಾನ ಗಳ ನಿರ್ವಹಣೆಗೆ ಹೊಸ ತೆರಿಗೆ ವ್ಯವಸ್ಥೆ ಜಾರಿಗೆ ತರಲಾಯಿತು. ಗೃಹೇತರ, ವಾಣಿಜ್ಯ ಮತ್ತು ಕೈಗಾರಿಕಾ ಬಳಕೆಯ ನೀರಿಗೆ ಶೇ.20 ರಷ್ಟು ದರ ಏರಿಕೆ ಮಾಡಲಾಯಿತು. 20 ವರ್ಷಗಳ ನಂತರ ವಾಣಿಜ್ಯ ಮಳಿಗೆಗಳ ಬಾಡಿಗೆ ದರ ಪರಿಷ್ಕರಿಸಲಾಯಿತು. ಈ ಹಿಂದೆ ಕುಡಿಯುವ ನೀರಿನ ಸಂಪರ್ಕ ಪಡೆದವರಿಗೆ ಮಾತ್ರ ಒಳಚರಂಡಿ ಶುಲ್ಕ (ಯುಜಿಡಿ) ವಿಧಿಸುವ ನಿಯಮ ಬದಲಾಯಿಸಿ ಬಿಬಿಎಂಪಿ ಮಾದರಿಯಲ್ಲಿ ಕುಡಿಯುವ ನೀರಿನ ಸಂಪರ್ಕ ಪಡೆಯದೆ ಇರುವವರಿಗೂ ಯುಜಿಡಿ ಶುಲ್ಕ ವಿಧಿಸಲಾಯಿತು. ನಗರದ ವಾಣಿಜ್ಯ ಕಟ್ಟಡ ಹಾಗೂ ಮಳಿಗೆಗಳನ್ನು ‘ಕಮರ್ಷಿಯಲ್ ಎ ಮತ್ತು ಬಿ’ ಎಂದು ವಿಂಗಡಿಸಿದ್ದ ಹಿನ್ನೆಲೆಯಲ್ಲಿ ವಾಣಿಜ್ಯೋದ್ಯಮಿಗಳು ಎದುರಿಸುತ್ತಿದ್ದ ಸಮಸ್ಯೆಯನ್ನು ಬಗೆಹರಿಸಲು ವಾಣಿಜ್ಯ ಕಟ್ಟಡಗಳಿಗೆ ಏಕರೂಪದ ತೆರಿಗೆ ವ್ಯವಸ್ಥೆ ಜಾರಿಗೊಳಿಸಲಾಯಿತು.
ನೀರಿನ ಶುಲ್ಕ ಸಕಾಲದಲ್ಲಿ ಪಾವತಿಸದೆ ಬಾಕಿ ಉಳಿಸಿಕೊಂಡವರಿಗೆ ಬಡ್ಡಿಯ ಮೇಲೆ ಬಡ್ಡಿ ವಿಧಿಸುವುದನ್ನು ಕೈ ಬಿಟ್ಟು ಅಸಲಿನ ಮೇಲೆ ಮಾತ್ರ ಬಡ್ಡಿ ವಿಧಿಸುವ ತೀರ್ಮಾನ ಕೈಗೊಳ್ಳಲಾಯಿತು. ಅಲ್ಲದೆ, ಬಡ್ಡಿ ಬೆಳೆಯುವುದನ್ನು ತಡೆದು ಜನರಿಗೆ ಅನುಕೂಲ ಕಲ್ಪಿಸಲು ‘ಬಡ್ಡಿ ನಿಶ್ಚಲ’ ಯೋಜನೆ ಜಾರಿಗೆ ತರಲಾಯಿತು.
ಪೂರ್ಣ ತೆರಿಗೆ ಪಾವತಿ ಮಾಡದ ಅಪಾರ್ಟ್‌ಮೆಂಟ್ ಅಥವಾ ವಾಣಿಜ್ಯ ಸಂಕೀರ್ಣದಲ್ಲಿ ಯಾವುದೇ ವ್ಯಕ್ತಿ ಫ್ಲಾಟ್, ಮಳಿಗೆ ಖರೀದಿ ಸಿದರೆ ಅಂತಹ ವ್ಯಕ್ತಿಗೆ ಪಾಲಿಕೆಯಲ್ಲಿ ಖಾತೆ ಮಾಡಿಕೊಡಲು ನಿಯಮಗಳು ಈ ಹಿಂದೆ ಅಡ್ಡಿಯಾಗುತಿತ್ತು. ಅಂತಹ ಸಂದರ್ಭದಲ್ಲಿ ಖಾತೆ ಮಾಡಿಸಿಕೊಳ್ಳಲು ಆಸಕ್ತಿ ತೋರುವ ವ್ಯಕ್ತಿ ಅಪಾರ್ಟ್‌ಮೆಂಟ್‌ನಲ್ಲಿರುವ ಎಲ್ಲ ಫ್ಲಾಟ್‌ಗಳಿಗೂ ತೆರಿಗೆ ಪಾವತಿಸುವ ಪರಿಸ್ಥಿತಿ ಇತ್ತು. ಈ ನಿಯಮಕ್ಕೆ ತಿದ್ದುಪಡಿ ತಂದು ವೈಯಕ್ತಿಕವಾಗಿ ಫ್ಲಾಟ್, ಮಳಿಗೆ ಖರೀದಿಸಿದವರು ತಮ್ಮ ಫ್ಲಾಟ್ ಅಥವಾ ಮಳಿಗೆಗೆ ಮಾತ್ರ ತೆರಿಗೆಯನ್ನು ಪಾವತಿಸಿ ಖಾತೆ ಮಾಡಿಸಿಕೊಳ್ಳಲು ಅವಕಾಶ ನೀಡಲಾಯಿತು.
5 ವರ್ಷಗಳ ಅವಧಿಯಲ್ಲಿ ಪರಿಸರ ಪೂರಕವಾದ ಹಲವು ತೀರ್ಮಾನಗಳನ್ನು ನಗರ ಪಾಲಿಕೆ ಕೈಗೊಂಡಿತು. ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿಕೊಂಡು ಇಂಟರ್‌ಲಾಕ್, ಮೇಜು, ಕುರ್ಚಿಗಳನ್ನು ತಯಾರಿಸುವ ಘಟಕ ಪ್ರಾರಂಭಿಸಲಾಯಿತು. ಕಸ ಸಾಗಿಸಲು ಸಾಕಷ್ಟು ಪ್ರಮಾಣದಲ್ಲಿ ಎಲೆಕ್ಟ್ರಿಕ್ ಆಟೋ ಟಿಪ್ಪರ್‌ಗಳನ್ನು ಖರೀದಿಸಲಾಯಿತು. ಮಾಲಿನ್ಯದ ಪ್ರಮಾಣ ತಪ್ಪಿಸಲು ಗ್ರೀನ್ ವೆಡ್ಡಿಂಗ್ ಪರಿಕಲ್ಪನೆಯನ್ನು ಪರಿಚಯಿಸಲಾಯಿತು.
ನಗರದ ಪ್ರತಿಯೊಂದು ಬೀದಿಗಳಿಗೂ ಎಲ್‌ಇಡಿ ಬಲ್ಬ್ ಅಳವಡಿಸುವ ನಗರ ಪಾಲಿಕೆಯ ಮಹತ್ವಕಾಂಕ್ಷೆಯ ಯೋಜನೆಗೆ ಚಾಲನೆ ದೊರೆಯಿತು. ಇದರಿಂದ ವಾರ್ಷಿಕ 14 ಕೋಟಿ ರೂ. ಉಳಿತಾಯವಾಗುತ್ತಿದೆ. ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ‘ಗ್ಯಾಸ್ ಪೈಪ್‌ಲೈನ್’ ಯೋಜನೆಗೆ ಚಾಲನೆ ದೊರೆಯಿತು. ಸೂಯೇಜ್‌ಫಾರ್ಮ್‌ನಲ್ಲಿ ಬೆಟ್ಟದ ರೀತಿಯಲ್ಲಿ ಬೆಳೆದಿರುವ ಹಳೆಯ ತ್ಯಾಜ್ಯವನ್ನು ಬಯೋಮೈನಿಂಗ್ ಮೂಲಕ ವಿಲೇವಾರಿ ಮಾಡಲು ಟೆಂಡರ್ ಕರೆಯಲಾಗಿದೆ. ಸೂಯೇಜ್ ಫಾರ್ಮ್ ಮೇಲಿನ ಒತ್ತಡ ಕಡಿಮೆ ಮಾಡಲು ಕೆಸರೆ ಮತ್ತು ರಾಯನಕೆರೆಯಲ್ಲಿ ಘನತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ ಮಾಡಲಾಯಿತು.
ಜನರು ನಗರ ಪಾಲಿಕೆ ಕಚೇರಿ ಅಲೆಯುವುದನ್ನು ತಪ್ಪಿಸಲು ಮೇಯರ್ ಶಿವಕುಮಾರ್ ಪ್ರಥಮ ಬಾರಿಗೆ ‘ಪಾಲಿಕೆ ಅದಾಲತ್’ ಪ್ರಾರಂಭಿಸಿ ಜನಮೆಚ್ಚುಗೆ ಪಡೆದರು. ನಗರದಲ್ಲಿ ತ್ಯಾಜ್ಯದ ಕೊಂಪೆಯಾಗಿದ್ದ 65 ಸ್ಥಳಗಳನ್ನು ಅಭಿವೃದ್ಧಿ ಪಡಿಸಿ ತ್ಯಾಜ್ಯ ಸುರಿಯುವುದಕ್ಕೆ ಕಡಿವಾಣ ಹಾಕಲಾಯಿತು. ದುಸ್ಥಿತಿಯಲ್ಲಿರುವ ದೊಡ್ಡಗಡಿಯಾರ ಸಂರಕ್ಷಣಾ ಕಾಮಗಾರಿಗೆ ಚಾಲನೆ ದೊರೆಯಿತು. ‘ಟ್ರಿಣ್ ಟ್ರಿಣ್ ಪಬ್ಲಿಕ್ ಬೈಸಿಕಲ್ ಷೇರಿಂಗ್’ ಯೋಜನೆಯಡಿ ಹೊಸ ಸೈಕಲ್‌ಗಳು ಬೀದಿಗೆ ಇಳಿದವು, ನಗರದ ಪ್ರಮುಖ ರಸ್ತೆಗಳಲ್ಲಿ ಸೈಕಲ್ ಟ್ರಾೃಕ್ ನಿರ್ಮಾಣಗೊಂಡಿತು. ನಗರದ 245 ಜನ ಪರಿಶಿಷ್ಟ ಜಾತಿಗೆ ಸೇರಿದ ವೀಳ್ಯದೆಲೆ ಬೆಳೆಗಾರರಿಗೆ ಸೂಯೇಜ್ ಫಾರ್ಮ್‌ನಲ್ಲಿ ವೀಳ್ಯದೆಲೆ ಬೆಳೆಯಲು ತಲಾ 5 ಗುಂಟೆ ಜಾಗ ನೀಡಲು ಪಾಲಿಕೆ ಒಪ್ಪಿಗೆ ನೀಡಿತು.
ನಗರದ ಎಂಜಿ ರಸ್ತೆಯಲ್ಲಿ ಫುಟ್‌ಪಾತ್ ಹಾಗೂ ರಸ್ತೆ ಅಭಿವೃದ್ಧಿ ಕಾಮಗಾರಿಯಲ್ಲಿ 1.40 ಕೋಟಿ ರೂ. ಮೊತ್ತದ ಅವ್ಯವಹಾರ ನಡೆಯಿತು. ಡಬಲ್ ಬಿಲ್ ಸೃಷ್ಟಿಸಿ ಅವ್ಯಹಾರ ನಡೆದಿರುವುದು ತನಿಖೆಯಿಂದ ಸಾಬೀತಾದ ಹಿನ್ನೆಲೆಯಲ್ಲಿ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಿ ಇಬ್ಬರು ಅಧಿಕಾರಿಗಳನ್ನು ಅಮಾನಗುತೊಳಿಸಲಾಯಿತು. ಇದೇ ರೀತಿ ಪಾಲಿಕೆಯ ವಲಯ ಕಚೇರಿ 8ರ ವ್ಯಾಪ್ತಿಯ ಎನ್.ಆರ್.ಮೊಹಲ್ಲಾದ ತಿಬ್ಬಾದೇವಿ ವೃತ್ತದ ಹತ್ತಿರದ ಸ್ಮಶಾನ ಅಭಿವೃದ್ಧಿಯಲ್ಲೂ ಡಬಲ್ ಬಿಲ್ ಹಗರಣ ನಡೆಯಿತು.
ಏಕ ಬಳಕೆಯ ಪ್ಲಾಸ್ಟಿಕ್ ಮರುಬಳಕೆಯಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಇಪಿಆರ್ ಸರ್ಟಿಫಿಕೇಟ್ ಪಡೆದುಕೊಂಡ ದೇಶದ ಪ್ರಥಮ ಮತ್ತು ಏಕೈಕ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಯಿತು. ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಅಭಿಯಾನದಲ್ಲಿ ಮೈಸೂರು ನಗರ ರಾಜ್ಯಮಟ್ಟದ ಪ್ರಶಸ್ತಿ ಪಡೆದುಕೊಂಡಿತು. ಕೇಂದ್ರ ಸರ್ಕಾರ ನೀಡುವ ಕರ್ಮಯೋಗಿ ಪ್ರಶಸ್ತಿಯನ್ನು ಪಡೆದ ದಕ್ಷಿಣ ಭಾರತ ಪ್ರಥಮ ನಗರ ಎಂಬ ಹೆಗ್ಗಳಿಕೆಗೆ ಮೈಸೂರು ಪಾತ್ರವಾಯಿತು. ಸ್ವಚ್ಛ ಸರ್ವೇಕ್ಷಣೆಯಲ್ಲಿ 2018ರಲ್ಲಿ ಸಮಗ್ರ ವಿಭಾಗದಲ್ಲಿ 8ನೇ ಸ್ಥಾನ, 2019ರಲ್ಲಿ 3ನೇ ಸ್ಥಾನ, 2020ರಲ್ಲಿ 5ನೇ ಸ್ಥಾನ, 2021ರಲ್ಲಿ 11ನೇ ಸ್ಥಾನ, 2022ರಲ್ಲಿ 8ನೇ ಸ್ಥಾನ ಪಡೆದುಕೊಂಡಿತು.
ಜಾರಿಗೊಳ್ಳದ ಯೋಜನೆಗಳು
* ಕನಸಾಗಿಯೇ ಉಳಿದ ಗ್ರೇಟರ್ ಮೈಸೂರು
* ಅಭಿವೃದ್ಧಿ ಕಾಣದ ಪಾರಂಪರಿಕ ಕಟ್ಟಡಗಳು
* ಜಾರಿಯಾಗದ ಪೇ ಆ್ಯಂಡ್ ಪಾರ್ಕ್ ಯೋಜನೆ