

ವಿಜಯಪುರ: ಲಿಂಗಾಯತ ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಕೇವಲ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಾತ್ರ ಸೀಮಿತವಾಯಿತೇ ಎಂದು ಎನ್ಸಿಪಿ ಜಿಲ್ಲಾಧ್ಯಕ್ಷ ಬಿ.ಎಂ. ಬಿರಾದಾರ ಪ್ರಶ್ನಿಸಿದ್ದಾರೆ.
ಹೋರಾಟ ಪ್ರಾರಂಭವಾಗಿ ದಶಕ ಕಳೆದರೂ ಪ್ರತಿಫಲ ಸಿಗಲಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ಸಿಕ್ಕಿತು. ರಾಜಕೀಯ ಬೆಂಬಲವೂ ಇತ್ತು. ನೇತೃತ್ವ ವಹಿಸಿಕೊಂಡಿದ್ದ ಬಸವಜಯ ಮೃತ್ಯುಂಜಯ ಸ್ವಾಮೀಜಿ ರಾಜ್ಯಾದ್ಯಂತ ಪಾದಯಾತ್ರೆ ಮಾಡಿ ಬಿಜೆಪಿಗೆ ಬಿಸಿ ಮುಟ್ಟಿಸಿದರು.
ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಹೋರಾಟದಲ್ಲಿ ಧುಮುಕಿದ್ದರು. ಹೋರಾಟವನ್ನೇ ತಮ್ಮದಾಗಿಸಿಕೊಂಡಿದ್ದರು. ವಿಜಯಾನಂದ ಕಾಶಪ್ಪನವರ, ವಿನಯ್ ಕುಲಕರ್ಣಿ, ಲಕ್ಷಿ$್ಮ ಹೆಬ್ಬಾಳಕರ, ಶಿವಾನಂದ ಪಾಟೀಲ, ಅಶೋಕ ಮನಗೂಳಿ, ರಾಜುಗೌಡ ಪಾಟೀಲ ಹೀಗೆ ಅನೇಕರು ಹೋರಾಟದಲ್ಲಿ ಗುರುತಿಸಿಕೊಂಡರು.
ಶಾಸಕ ಯತ್ನಾಳರಂತೂ ತಮ್ಮದೇ ಪಕ್ಷದ ವಿರುದ್ಧ ತೊಡೆ ತಟ್ಟಿದ್ದರು. ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಅಬ್ಬರಿಸಿದ್ದರು. ಕೊನೆಗೆ ಬೊಮ್ಮಾಯಿ ಮೀಸಲಾತಿ ೂಷಣೆ ಮಾಡಿ ಕೈ ತೊಳೆದುಕೊಂಡರು. ನಂತರ ಬಂದ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ನಿಂದ ನ್ಯಾಯ ಸಿಗಲಿದೆ ಎಂಬ ವಿಶ್ವಾಸ ಇರಿಸಿಕೊಂಡಿದ್ದ ಸಮಾಜದ ಜನತೆಗೆ ಶಾಕ್ ಆಗಿದೆ ಎಂದು ಬಿರಾದಾರ ತಿಳಿಸಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಮೀಸಲಾತಿ ಹೋರಾಟ ಪಕ್ಕಕ್ಕೆ ಸರಿದಿದೆ. ವಿರೋಧ ಪದದಲ್ಲಿದ್ದಾಗ ಗುಡುಗಿದ್ದ ಕಾಂಗ್ರೆಸ್ ನಾಯಕರು ಸಹ ಸುಮ್ಮನಾಗಿದ್ದಾರೆ.
ಆ ಬಗ್ಗೆ ಚಕಾರವೆತ್ತುತ್ತಿಲ್ಲ. ಸೋ ಕಾಲ್ಡ್ ಹುಲಿಗಳೆಲ್ಲ ಗುಹೆ ಸೇರಿಬಿಟ್ಟಿವೆ. ಹೀಗಾಗಿ ಸಮಾಜದ ಜನರ ಮನಸ್ಸಿಗೆ ಘಾಸಿಯಾಗಿದೆ. ಇನ್ನಾದರೂ ಸಮುದಾಯದ ಶಾಸಕರು, ಸಚಿವರು ಹಾಗೂ ಮಾಜಿ ಶಾಸಕರು ಸಹಿತ ಹೋರಾಟದ ಮುಂಚೂಣಿ ವಹಿಸಿದ್ದ ನಾಯಕರು ಧ್ವನಿ ಎತ್ತಬೇಕು. ಇಲ್ಲವಾದಲ್ಲಿ ಸಮುದಾಯದ ಆಕ್ರೋಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.