

ಶಿವಮೊಗ್ಗ: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರಕ್ಕೆ ಯತ್ನಿಸಿ ಬಳಿಕ ಕೊಲೆ ಮಾಡಿರುವ ರಾಕ್ಷಸಿ ಕೃತ್ಯವನ್ನು ಎಲ್ಲರೂ ಖಂಡಿಸಬೇಕು ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಈಗಾಗಲೇ ಕಾನೂನಿನ ಚೌಕಟ್ಟಿನಲ್ಲಿ ಅಪರಾಧಿಯನ್ನು ಗುಂಡಿಟ್ಟು ಕೊಲ್ಲಲಾಗಿದೆ. ಈ ಬಗ್ಗೆ ಸರ್ಕಾರ ಹಾಗೂ ಪೊಲೀಸ್ ಇಲಾಖೆಗೆ ಅಭಿನಂದನೆ ಸಲ್ಲಿಸುತ್ತೇನೆ. ಇಡೀ ಸಮಾಜ ತಲೆತಗ್ಗಿಸುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಇಂತಹ ಘಟನೆ ಇಲ್ಲಿಗೇ ಕೊನೆಯಾಗಬೇಕು. ಆ ನಿಟ್ಟಿನಲ್ಲಿ ಒಡಕು ತೊರೆದು ಸಮಾಜ ಒಟ್ಟಾಗಬೇಕು ಎಂದರು.
ದೇಶದಲ್ಲಿ ಸಾಕಷ್ಟು ಜನರು ಅಕ್ರಮವಾಗಿ ಬಂದು ನೆಲೆಸಿದ್ದಾರೆ. ಈ ಬಗ್ಗೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದೆ. ವಲಸೆ ಕಾರ್ಮಿಕರಿಗೂ ವ್ಯವಸ್ಥೆ ಮಾಡುತ್ತಿದೆ. ಅದರ ನಡುವೆ ಇಂತಹ ಹೇಯ ಘಟನೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.