‘ಜನಸ್ಪಂದನಾ’ದಲ್ಲಿ ದಯಾಮರಣ ಕೋರಿದ ವೃದ್ಧೆಗೆ ಡಿಸಿಎಂ ಹೇಳಿದ್ದೇನು ?!

Vijayavani-logo
Published on

ಬೆಂಗಳೂರು: ಜನಸ್ಪಂದನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ವೃದ್ಧೆಯೊಬ್ಬರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಳಿ ದಯಾಮರಣ ಕೋರಿದ ಘಟನೆ ಶುಕ್ರವಾರ ನಡೆಯಿತು.

ಯಲಹಂಕದಲ್ಲಿ ಆಯೋಜಿಸಿದ್ದ ಜನಸ್ಪಂದನಾ ವೇಳೆ ಯಲಹಂಕ ಉಪನಗರ ಬಳಿಯ ಸೋಮೇಶ್ವರನಗರದ ಲತಾ ( 62) ಎಂಬಾಕೆ ನನಗೆ ಸಾಯಲು ಅವಕಾಶ ಮಾಡಿಕೊಡಿ ಎಂದು ಅರ್ಜಿ ನೀಡಿದ್ದಕ್ಕೆ ಡಿಸಿಎಂ ಅರೆ ಕ್ಷಣ ಅವಕ್ಕಾದರು.

ಬಳಿಕ ಡಿಸಿಎಂ ನಿಮ್ಮ ಸಮಸ್ಯೆ ಏನು ಎಂದಿದ್ದಕ್ಕೆ, ನನ್ನನ್ನು ಮನೆಯಿಂದ ಮಗ ಹೊರ ಹಾಕಿದ್ದಾನೆ. ಈಗ ಬಾಡಿಗೆ ಮನೆಯಲ್ಲಿದ್ದೇನೆ. ನಾಲ್ಕು ತಿಂಗಳಿನಿಂದ ಬಾಡಿಗೆ ಕಟ್ಟಿಲ್ಲ. ಪತಿ ಇಲ್ಲದೆ ಒಬ್ಬಳೇ ಇದ್ದೇನೆ. ಕ್ಯಾನ್ಸರ್ ಕೂಡ ಇದೆ ಎಂದು ಕಣ್ಣೀರು ಹಾಕಿದರು.

ಆಗ ವೃದ್ಧೆಯನ್ನು ಸಂತೈಸಿದ ಡಿಸಿಎಂ, ದಯಾಮರಣ ಕೊಡಲಾಗದು, ಬೇಕಿದ್ದರೆ ನಿಮಗೆ ನೆರವು ನೀಡುತ್ತೇನೆ ಎಂದು ಜೇಬಿಗೆ ಕೈಹಾಕಿ ಕವರ್‌ನಲ್ಲಿ ಒಂದಿಷ್ಟು ಹಣವನ್ನು ಕೊಡಲು ಮುಂದಾದರು. ಆದರೆ, ವೃದ್ಧೆ ಹಣ ಪಡೆಯದೆ ನನಗೆ ಬೇರೆ ರೀತಿಯ ನೆರವು ನೀಡದಿದ್ದರೆ ದಯಾಮರಣ ಕೊಡುವಂತೆ ಪಟ್ಟು ಹಿಡಿದರು.

ಸ್ಥಳದಲ್ಲಿದ್ದ ಡಿಸಿ ಕೆ.ಎ.ದಯಾನಂದ್ ಅವರನ್ನು ಕರೆಸಿ ಮಹಿಳೆಯ ಸಮಸ್ಯೆ ಆಲಿಸುವಂತೆ ಸೂಚಿಸಿದರು. ಬಳಿಕ ಆಕೆಯನ್ನು ಸಮಾಧಾನ ಮಾಡಿ ಸಿಬ್ಬಂದಿ ಕಳುಹಿಸಿಕೊಟ್ಟರು.

ಈ ವೇಳೆ ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಆಕೆ, 2021ರ ನನ್ನನು ಮನೆಯಿಂದ ಹೊರದಬ್ಬಲಾಗಿದೆ. ಲವ್ ಮಾಡಿ ಮದುವೆ ಆದ ಬಳಿಕ ಮಗ-ಸೊಸೆ ನನ್ನನ್ನು ಪ್ರಾಣಿಯಂತೆ ನೋಡ್ತಾ ಇದ್ದರು. ಈಗ ಏಕಾಂಗಿಯಾಗಿದ್ದು, ಸರ್ಕಾರ ನನ್ನ ಬದುಕಿಗೆ ನೆರವು ನೀಡದಿದ್ದಲ್ಲಿ ದಯಾಮರಣಕ್ಕೆ ಅವಕಾಶ ನೀಡಲಿ ಎಂದು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net