ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಸಂಸದ ಜಿಗಜಿಣಗಿ ಹೇಳಿದ್ದೇನು? ಜೆಡಿಎಸ್‌ಗೆ ಕ್ಷೇತ್ರ ಬಿಟ್ಟುಕೊಡಬೇಕೆಂದರೆ ಹೇಗೆ?

MP RAMESH
ವಿಜಯಪುರ ನೂತನ ಪ್ರವಾಸಿ ಮಂದಿರದಲ್ಲಿ ಸಂಸದ ರಮೇಶ ಜಿಗಜಿಣಗಿ ಸುದ್ದಿಗೋಷ್ಠಿ ನಡೆಸಿದರು. ಅರುಣ ಶಹಾಪುರ, ಭೀಮಾಶಂಕರ ಹದನೂರ ಮತ್ತಿತರರಿದ್ದಾರೆ.
Published on

ವಿಜಯಪುರ: ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ವಿಚಾರ ಭರ್ಜರಿ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ರಮೇಶ ಜಿಗಜಿಣಗಿ, ಮೈತ್ರಿಯಿಂದ ಬಿಜೆಪಿಗೆ ಹೆಚ್ಚಿನ ಲಾಭವಾಗಲಿದೆ ಎಂದಿದ್ದಾರೆ.

ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಒಳ್ಳೆಯ ವಿಚಾರ. ಇದರಿಂದ ಬಿಜೆಪಿಗೆ ಸಾಕಷ್ಟು ಅನುಕೂಲವಾಗಲಿದೆ. ಆ ಪಕ್ಷದ ಮತಗಳು ಬಿಜೆಪಿಗೆ ಬರಲಿವೆ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಜೆಡಿಎಸ್‌ನಲ್ಲಿರುವ ಮುಸ್ಲಿಂರು ಮೈತ್ರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಆ ಪಕ್ಷದ ಆಂತರಿಕ ವಿಷಯ. ಆ ಬಗ್ಗೆ ಮಾತನಾಡುವುದಿಲ್ಲ ಎಂದ ಜಿಗಜಿಣಗಿ, ವಿಜಯಪುರ ಲೋಕಸಭೆ ಕ್ಷೇತ್ರ ಜೆಡಿಎಸ್‌ಗೆ ಬಿಟ್ಟು ಕೊಡುವುದಾದರೆ ಬಿಟ್ಟು ಕೊಡಲಿ. ನನ್ನ ಅಭ್ಯಂತರವಿಲ್ಲ. ಅದು ಹೈಕಮಾಂಡ್ ನಿರ್ಧಾರ ಎಂದು ಪ್ರತಿಕ್ರಿಯಿಸಿದರು.

ರೈಲ್ವೆ ಕ್ಷೇತ್ರದ ಅಭಿವೃದ್ಧಿ

ಜಿಲ್ಲೆಯ ರೈಲ್ವೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಲಾಗಿದೆ. ಈವರೆಗೆ ಸುಮಾರು 1311 ಕೋಟಿ ರೂಪಾಯಿ ಅನುದಾನ ಒದಗಿಸಲಾಗಿದೆ. ಗೂಡ್‌ಶೆಡ್, ಪ್ಲಾಟ್ ಫಾರ್ಮ್, ರೈಲ್ವೆ ಮೇಲ್ಸೇತುವೆ ಹೀಗೆ ಹಲವು ಕಾಮಗಾರಿ ಕೈಗೊಳ್ಳಲಾಗಿದೆ. ರೈಲು ಸೇವೆಗಳನ್ನು ಹೆಚ್ಚಿಸಲಾಗಿದೆ. ಅ.1ರಂದು ಗೂಡ್‌ಶೆಡ್ ಉದ್ಘಾಟನೆಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲೂ ವಂದೇ ಭಾರತ ರೈಲು ಓಡಿಸುವ ಕುರಿತಂತೆ ಈಗಾಗಲೇ ಕೇಂದ್ರ ರೈಲ್ವೆ ಸಚಿವರೊಂದಿಗೆ ಚರ್ಚಿಸಲಾಗಿದೆ. ಸೋಲಾಪುರಕ್ಕೆ ಒಂದು ರೈಲು ಬಂದು ನಿಲ್ಲುತ್ತದೆ. ಅದೇ ರೈಲು ವಿಜಯಪುರಕ್ಕೆ ತಂದು ಇಲ್ಲಿಂದಲೇ ಮುಂಬೈಗೆ ಓಡಿಸಲು ಮನವಿ ಮಾಡಲಾಗಿದೆ ಎಂದರು.

ಮಹಿಳಾ ಮೀಸಲಾತಿ

ವಿಪ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ರಾಜಕೀಯವಾಗಿ ಮಹಿಳೆಯರಿಗೆ ಮೀಸಲಾತಿ ಹೆಚ್ಚಿಸಬೇಕೆಂಬ ಕೂಗು ಸ್ವಾತಂತ್ರೃದ ದಿನಗಳಿಂದಲೂ ಇತ್ತು. ಈ ಹಿಂದೆ ಸಾಕಷ್ಟು ಸರ್ಕಾರಗಳು ಆಡಳಿತ ನಡೆಸಿದರೂ ಆ ಕನಸು ಸಾಕಾರಗೊಂಡಿರಲಿಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಇಚ್ಛಾಶಕ್ತಿಯ ಫಲವಾಗಿ ಮಹಿಳಾ ಮೀಸಲಾತಿ ಜಾರಿಯಾಗಿದ್ದಲ್ಲದೇ ಇದೀಗ ರಾಷ್ಟ್ರಪತಿ ಅಂಕಿತವೂ ಬಿದ್ದಿದೆ. ಇದೊಂದು ಹೆಮ್ಮೆಯ ಸಂಗತಿ ಎಂದು ವಿಪ ಮಾಜಿ ಸದಸ್ಯ ಅರುಣ ಶಹಾಪುರ ತಿಳಿಸಿದರು.

ಮಹಿಳಾ ಮೀಸಲಾತಿ ಜಾರಿಯಾಗಲು ಕ್ಷೇತ್ರ ಪುನರ್ ವಿಂಗಡಣೆ ಆಗಬೇಕು. ಅದಾದ ಬಳಿಕ ಮೀಸಲಾತಿ ಅನುಷ್ಠಾನಕ್ಕೆ ಬರಲಿದೆ. ಇದು ಕಾಯ್ದೆಯಲ್ಲಿಯೇ ಹೇಳಲಾಗಿದೆ. ಬಹಳ ವರ್ಷಗಳ ಆಶಯವಾಗಿದ್ದ ಮಹಿಳಾ ಮೀಸಲಾತಿ ಪ್ರಧಾನಿ ನರೇಂದ್ರ ಮೋದಿ ಅವರ ಅವಧಿಯಲ್ಲಿ ಸಾಕಾರಗೊಂಡಿದ್ದು ಸಂತಸ ತಂದಿದೆ ಎಂದರು.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕೂಡ ಮಹಿಳಾ ಮೀಸಲಾತಿ ಜಾರಿ ನನ್ನ ಕನಸಾಗಿತ್ತು ಎನ್ನುತ್ತಾರೆ. ಆದರೆ ಕನಸು ಕಾಣುವುದೇ ಕಾಂಗ್ರೆಸ್ ಸಾಧನೆಯಾಗಿದೆ. ಅವರ ಮಾತಿನಿಂದಲೇ ಅವರ ಪಾಪಪ್ರಜ್ಞೆ ಹೊರಬಂದಿದೆ ಎಂದರು.
ಮುಖಂಡರಾದ ಭೀಮಾಶಂಕರ ಹದನೂರ, ಸಂದೀಪ ಪಾಟೀಲ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net