

ಮಡಿಕೇರಿ:
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಕೊಡಗಿನ ಆರೋಗ್ಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಿಕ್ಕಿದೆ. ಜಿಲ್ಲೆಯ ಆರ್ಥಿಕತೆಯ ಪ್ರಮುಖ ಮೂಲವಾದ ಪ್ರವಾಸೋದ್ಯಮಕ್ಕೆ ನೇರವಾಗಿ ಯಾವುದೇ ಯೋಜನೆ ಘೋಷಣೆ ಆಗಿಲ್ಲದಿದ್ದರೂ ಒಟ್ಟಾರೆ ಕಾರ್ಯಕ್ರಮಗಳ ಪ್ರಯೋಜನ ಸಿಗಬಹುದು. ಕೊಡಗಿನ ಕಾಫಿ ಬೆಳೆಗೆ ತತ್‌ಕ್ಷಣಕ್ಕೆ ಪ್ರಯೋಜನ ಆಗಬಹದಾದ ಕಾರ್ಯಕ್ರಮಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಆದರೆ ಕಾಫಿ ಉದ್ಯಮಕ್ಕೆ ರೂಪಿಸಿರುವ ಯೋಜನೆಗಳು ಭವಿಷ್ಯದಲ್ಲಿ ಅನುಕೂಲಕರ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಕೊಡಗಿನ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ಸಿಕ್ಕಿರುವುದು ಗಮನಾರ್ಹವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸಂಯೋಜಿತ ಮತ್ತು ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ ಸ್ಥಾಪನೆಯ ಘೋಷಣೆ ಬಜೆಟ್‌ನಲ್ಲಿ ಮಾಡಲಾಗಿದೆ. ಇದರ ಜತೆಗೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಅಪಾಯಕಾರಿ ಸಾಂಕ್ರಾಮಿಕ ರೋಗಗಳು ಮತ್ತು ವೈರಲ್ ಸೋಂಕುಗಳನ್ನು ಪತ್ತೆಹಚ್ಚಲು ವೈರಲ್ ರೀಸರ್ಚ್ ಮತ್ತು ಡೈಯಾಗನೋಸ್ಟಿಕ್ ಲ್ಯಾಬೋರೇಟರಿ ಸ್ಥಾಪನೆ ಮಾಡುವ ಪ್ರಸ್ತಾಪ ಇದೆ.
ಅಲ್ಲದೆ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಪಿಪಿ ಮಾದರಿಯಲ್ಲಿ ಕಾರ್ಡಿಯಾಕ್ ಯೂನಿಟ್ ಆರಂಭವನ್ನೂ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳವಣಿಗೆಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಚಟುವಟಿಕೆ ಆಧಾರಿತ ಪರಿಸರವನ್ನು ಒದಗಿಸಲು ಈಗಾಗಲೇ ಅನುಮೋದನೆಗೊಂಡಿರುವ ವಿಜ್ಞಾನ ಕೇಂದ್ರ ಮತ್ತು ತಾರಾಲಯಗಳನ್ನು ಮಡಿಕೇರಿಯಲ್ಲಿ ನಿರ್ಮಿಸುವ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಜಿಲ್ಲೆಯ ಪೊನ್ನಂಪೇಟೆಯಲ್ಲಿ ೫ ಕೋಟಿ ರೂ. ವೆಚ್ಚದಲ್ಲಿ ಕ್ರೀಡಾ ವಸತಿ ನಿಲಯ ಕಟ್ಟಡ ನಿರ್ಮಾಣವನ್ನೂ ಈ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದೆ. ವಿರಾಜಪೇಟೆಯಲ್ಲಿ ೧೨ ಕೋಟಿ ರೂ. ವೆಚ್ಚದಲ್ಲಿ ಹೊಸ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಈ ಬಜೆಟ್‌ನಲ್ಲಿ ಪ್ರಸ್ತಾಪ ಮಾಡಿರುವಂತೆ ಅಂದಾಜು ೩೬ ಕೊಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳು ನಿರ್ಮಾಣವಾಗಲಿರುವ ಸ್ಥಳಗಳ ಪಟ್ಟಿಯಲ್ಲಿ ಮಡಿಕೇರಿ ಕೂಡ ಸ್ಥಾನ ಪಡೆದುಕೊಂಡಿದೆ.