ರಾಜ್ಯ ಬಜೆಟ್ ನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಿಕ್ಕಿದ್ದೇನು?

cbp-1.jpg
Published on

ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಇದರ ನಡುವೆ ಜಿಲ್ಲೆಗೆ ಸಿಕ್ಕಿದ್ದೇನು? ಎಂಬುದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ.
ಈ ಬಾರಿ ಆಯಾ ಕ್ಷೇತ್ರಕ್ಕೆ ಒಂದು ಕೊಡುಗೆಯನ್ನು ಪಡೆದುಕೊಳ್ಳುವಲ್ಲಿ ಜನಪ್ರತಿನಿಧಿಗಳು ಯಶಸ್ವಿಯಾಗಿದ್ದಾರೆ. ಎಚ್.ಎನ್.ಪ್ರಾಧಿಕಾರ ರಚನೆ, ತಾಂತ್ರಿಕ ವಿಶ್ವ ವಿದ್ಯಾಲಯದ ಟಕ ಕಾಲೇಜ್, 2 ಪ್ರಜಾ ಸೌಧಗಳು, ಪೊಲೀಸ್ ಪಡೆ ಕೇಂದ್ರ ಸೇರಿದಂತೆ ಹಲವು ಕೊಡುಗೆಗಳು ಸಿಕ್ಕಿವೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ ಎಂ.ಸಿ.ಸುಧಾಕರ್, ಶಾಸಕ ಪ್ರದಿಪ್ ಈಶ್ವರ್ ಅಯ್ಯರ್, ಎಸ್.ಎನ್.ಸುಬ್ಬಾರೆಡ್ಡಿ ಬೇಡಿಕೆಗಳಿಗೆ ಅಸ್ತು ಎನ್ನಲಾಗಿದೆ. ಅದರಲ್ಲೂ ಬೆಂಗಳೂರಿಗೆ ಭೇಟಿ ಮಾಡಿದ ಜಿ.ಪಂ.ಮಾಜಿ ಅಧ್ಯಕ್ಷ ಎಚ್.ವಿ.ಮಂಜುನಾಥ್ ನೇತೃತ್ವದ ಗೌರಿಬಿದನೂರು ನಿಯೋಗಕ್ಕೆ ಮುಖ್ಯಮಂತ್ರಿ ಸ್ಪಂದಿಸಿದ್ದಾರೆ.

ಜಿಲ್ಲೆಗೆ ಬಜೆಟ್ ಕೊಡುಗೆಗಳು
*150 ಕೋಟಿ ರೂ ವೆಚ್ಚದಲ್ಲಿ ಚಿಂತಾಮಣಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ ಟಕ ಕಾಲೇಜು ಸ್ಥಾಪನೆ.
* ಶಿಕ್ಷಣ ತಜ್ಞ ಡಾ ಎಚ್.ನರಸಿಂಹಯ್ಯ ಪ್ರಾಧಿಕಾರ ಸ್ಥಾಪನೆ, ಅವರ ವ್ಯಾಸಂಗದ ಗೌರಿಬಿದನೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಉನ್ನತಿಕರಣ.
* ಹೊಸದಾಗಿ ಚೇಳೂರು, ಮಂಚೇನಹಳ್ಳಿ ತಾಲೂಕಿನಲ್ಲಿ ಪ್ರಜಾ ಸೌಧಗಳ ನಿರ್ಮಾಣ. ಚೇಳೂರಿನಲ್ಲಿನ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಉನ್ನತಿಕರಣ.
* ನಂದಿ ಬೆಟ್ಟದ ಕುಡುವತಿ ಸಮೀಪ ಭಾರತೀಯ ಮೀಸಲು ಪೊಲೀಸ್ ಪಡೆಗಳ ಕೇಂದ್ರ ಸ್ಥಾಪನೆ.
* ಸತ್ಯಸಾಯಿ ಅನ್ನಪೂರ್ಣ ಟ್ರಸ್ಟ್ ವತಿಯಿಂದ ಮೂರು ದಿನಗಳಿಂದ ವಾರದ ಐದು ದಿನ ಶಾಲಾ ಮಕ್ಕಳಿಗೆ ಸಾಯಿ ಶ್ಯೂರ್ ರಾಗಿ ಹೆಲ್ತ್ ಮಿಕ್ಸ್ ಪುಡಿಯನ್ನು ವಿಸ್ತರಣೆ. ಇದರ 100 ಕೋಟಿ ರೂ ವೆಚ್ಚದ ಯೋಜನೆಗೆ ರಾಜ್ಯ ಸರ್ಕಾರದಿಂದ ಶೇ.25 ರಷ್ಟು ವೆಚ್ಚವನ್ನು ಭರಿಸುವುದು.
* 70 ಕೋಟಿ ರೂ ವೆಚ್ವದಲ್ಲಿ ಎಚ್.ಎನ್.ವ್ಯಾಲಿ 2 ನೇ ಹಂತದ ಯೋಜನೆಯಡಿ 24 ಕೆರೆಗಳಿಗೆ ನೀರು ಹರಿಸುವುದು.
* ರಾಮನಗರದ ಜತೆಗೆ ಶಿಡ್ಲಟ್ಟದಲ್ಲಿ ಹೈ ಟೆಕ್ ರೇಷ್ಮೆ ಗೂಡಿ ಮಾರುಕಟ್ಟೆ ನಿರ್ಮಾಣದ ಎರಡನೇ ಹಂತದ ಕಾಮಗಾರಿಗೆ 250 ಕೋಟಿ ರೂ ಬಿಡುಗಡೆ.
* ಕನಿಷ್ಠ ಬೆಂಬಲ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್ ಗೆ 7550 ರೂ ಜತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹ ಧನ 450 ರೂಗಳಂತೆ 138 ಕೋಟಿ ರೂ ನೀಡಲು ತೀರ್ಮಾನ. ಇದರಿಂದ ತೊಗರಿ ಬೆಳೆಯುವ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗದ ಜತೆಗೆ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲಕರ.
* ಸಾರ್ವಜನಿಕ&ಖಾಸಗಿ ಸಹಭಾಗಿತ್ವದಲ್ಲಿ ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net