ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ

26 SND 01
ಸಿಂಧನೂರು ತಾಲೂಕಿನ ತಿಡಿಗೋಳ ಗ್ರಾಮದಲ್ಲಿ ಮಳೆಯಿಂದ ನೆಲಕ್ಕೊರಗಿದ ಭತ್ತ.
Published on

ಸಿಂಧನೂರು: ದುಂಡಾಣು ರೋಗದಿಂದ ಭತ್ತ ರಕ್ಷಿಸಿಕೊಳ್ಳುವ ಹೊತ್ತಲ್ಲಿ ಮತ್ತೆ ಶುರುವಾದ ಮಳೆಯು ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕ್ಕೊರಗಿಸಿದ್ದು, ರೈತರ ಬದುಕು ಮುರಾಬಟ್ಟೆಗೊಳಿಸಿದೆ. ತಾಲೂಕಿನಲ್ಲಿ ಈ ಬಾರಿ ನೀರಿನ ಕೊರತೆಯಾಗದೆ ಸಮೃದ್ಧವಾಗಿ ಭತ್ತ ಬೆಳೆಯಲಾಗಿತ್ತು. ಆದರೆ, ಕಳೆದ ತಿಂಗಳ ನಿರಂತರವಾಗಿ ಸುರಿದ ಮಳೆಯಿಂದ ಭತ್ತಕ್ಕೆ ದುಂಡಾಣು, ವೈರಸ್ ಸೇರಿ ನಾನಾ ರೋಗ ಹರಡಿತ್ತು. ಸಮೃದ್ಧವಾಗಿ ಬೆಳೆದು ತೆನೆ ಬಿಡುವ ಹಂತದಲ್ಲಿ ಉಂಟಾದ ವಾತಾವರಣದ ವೈಪರೀತ್ಯ ರೈತರನ್ನು ಸಂಕಷ್ಟಕ್ಕೆ ದೂಡಿತ್ತು. ರೋಗದಿಂದ ತಪ್ಪಿಸಿಕೊಳ್ಳಲು ನಾನಾ ಕ್ರಿಮಿನಾಶಕ ಸಿಂಪಡನೆ ಮಾಡಿ, ರೋಗ ಹತೋಟಿಗೆ ತಂದಿದ್ದ ರೈತರು ಮತ್ತೊಮ್ಮೆ ನಷ್ಟದ ಹಾದಿ ಹಿಡಿಯುವಂತಾಗಿದೆ. ಈ ಹಿಂದೆ ನಿರಂತರ ಮಳೆಯಿಂದ ಹತ್ತಿ, ತೊಗರಿ ಹಾಗೂ ಜೋಳದ ಬೆಳೆ ಮಾತ್ರ ಪೂರ್ಣ ಪ್ರಮಾಣದಲ್ಲಿ ನಷ್ಟ ಕಂಡಿದ್ದವು. ಭತ್ತದ ಬೆಳೆಗೆ ಅಷ್ಟಾಗಿ ಹೊಡೆತ ಬಿದ್ದಿರಲಿಲ್ಲ. ಕಳೆದ ಎರಡ್ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯು ಭತ್ತದ ಬೆಳೆಗೆ ಕಂಟಕವಾಗಿ ಪರಿಣಮಿಸಿದೆ. ಗದ್ದೆಗಳಲ್ಲಿ ಭತ್ತ ನೆಲಕ್ಕೊರಗಿದ್ದು ಕೆಂಪು ಹತ್ತಿದ್ದ ಭತ್ತ ತೆನೆಗಳೆಲ್ಲ ಉದುರಿ ಹೋಗಿವೆ. ಯಾರಿಗೆ ಮೊರೆ ಹೋಗಲಿ: ನಮ್ಮ ಹಣೆ ಬರಹವೇ ಸರಿಯಿಲ್ಲ. ಯಾವುದೇ ರೋಗ, ಹೆಚ್ಚಿನ ಮಳೆ ಆಗದೆ ಸಮೃದ್ಧವಾಗಿ ಬೆಳೆದ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಇರುವುದಿಲ್ಲ. ಈಗ ರೋಗದ ಜತೆಗೆ ಮಳೆಯು ವಕ್ಕರಿಸಿರುವುದರಿಂದ ಬೆಳೆದ ಭತ್ತ ಕೈಗೆ ಸೇರುವುದೇ ಅನುಮಾನ ಮೂಡಿಸಿದೆ. ರೋಗಕ್ಕೆ ಅರ್ಧದಷ್ಟು ಭತ್ತದ ಇಳುವರಿ ಕಳೆದುಕೊಂಡಿದ್ದರೆ, ಇನ್ನೂ ಮಳೆಗೆ ನೆಲಕ್ಕೆ ಭತ್ತದ ಬೆಳೆ ಅಪ್ಪಳಿಸಿದೆ. ಈ ಪರಿಸ್ಥಿತಿಯಿಂದ ರೈತರು ಕಣ್ಣೀರು ಹಾಕುವಂತಾಗಿದೆ. ನಮ್ಮ ಕಷ್ಟವನ್ನು ಯಾರಿಗೆ ಹೇಳಬೇಕೆಂಬ ಪ್ರಶ್ನೆ ಎದುರಾಗಿದೆ. ಈ ಹಿಂದೆ ರೋಗಕ್ಕೆ ತುತ್ತಾದ ಭತ್ತಕ್ಕೆ ಸರ್ಕಾರ ನಯಾಪೈಸೆ ಪರಿಹಾರ ನೀಡುವುದಿಲ್ಲ ಎಂದು ಹೇಳುತ್ತಿದ್ದು, ಈಗ ಭತ್ತದ ಬೆಳೆ ಮಳೆಯಿಂದ ನೆಲಕ್ಕೆ ಬಿದ್ದಿದ್ದು ಈಗ ಪರಿಹಾರ ನೀಡಲು ಇನ್ನೂ ಸರ್ವೇ ನಡೆಯಬೇಕಿದೆ. ಭತ್ತ ಬೆಳೆಯಲು ಅಧಿಕ ಖರ್ಚು: ರೈತರು ಭತ್ತ ಬೆಳೆಯಲು ಹೆಚ್ಚಿನ ಖರ್ಚು ಮಾಡಿಕೊಂಡಿದ್ದಾರೆ. ಈ ಹಿಂದೆ 20 ಸಾವಿರದಿಂದ 25 ಸಾವಿರ ರೂ. ವರೆಗೆ ಖರ್ಚು ಮಾಡುತ್ತಿದ್ದ ರೈತರು ರೋಗದಿಂದ ಪಾರಾಗಲು 30ರಿಂದ 35 ಸಾವಿರ ರೂ. ವೆಚ್ಚ ಮಾಡಿದ್ದು ಎಕರೆಗೆ ಭತ್ತ 30 ಚೀಲ ಬರುವುದು ಅನುಮಾನವಿದೆ. ಮಾರುಕಟ್ಟೆಯಲ್ಲಿಯೂ 1400-1500 ರೂ. 75 ಕೆಜಿ ಚೀಲ ಭತ್ತಕ್ಕೆ ಬೆಲೆ ಇದೆ. ಆದರೆ, ಈ ದರದಲ್ಲಿ ಖರ್ಚು ಸರಿದೂಗಿಸುವುದೇ ರೈತಾಪಿ ವರ್ಗಕ್ಕೆ ಸವಾಲಾಗಿದೆ. ಯಾವ ರೀತಿ ಲೆಕ್ಕ ಹಾಕಿದ್ರೂ, ರೈತರ ಬೆಳೆಗೆ ಬೆಲೆ ಇಲ್ಲದಂತಾಗಿದೆ. ಒಟ್ಟಿನಲ್ಲಿ ರೈತರ ಬದುಕು ಹಸನಾಗಬೇಕೆಂಬ ಆಶಯ ಇದುವರೆಗೂ ಈಡೇರಿಲ್ಲ.

ಸಿಂಧನೂರು ತಾಲೂಕಿನಲ್ಲಿ ಕಳೆದ ತಿಂಗಳು ಹಾಗೂ ಅಕ್ಟೋಬರ್ ಆರಂಭದಲ್ಲಿ ಸುರಿದ ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟವಾಗಿದ್ದು, ಸರ್ವೇ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಕಳೆದ ಎರಡ್ಮೂರು ದಿನಗಳಿಂದ ಭತ್ತ ನೆಲಕ್ಕೊರಗಿರುವ ಬಗ್ಗೆ ಮಾಹಿತಿ ಇದೆ. ಆದಷ್ಟು ಬೇಗ ಬೆಳೆನಷ್ಟ ಸರ್ವೇ ನಡೆಸಲಾಗುವುದು. ಅರುಣ್ ದೇಸಾಯಿ ತಹಸೀಲ್ದಾರ್, ಸಿಂಧನೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net