

ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಮೇಕೆದಾಟು ಯೋಜನೆಗಾಗಿ ಹೋರಾಟ ಮಾಡಿದವರು ಇದೀಗ ಏನು ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.
ನಗರದ ಸುತ್ತೂರು ಶಾಖಾ ಮಠಕ್ಕೆ ಭಾನುವಾರ ಭೇಟಿ ನೀಡಿ, ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ‘ನಮ್ಮ ನೀರು ನಮ್ಮ ಹಕ್ಕು’ ಎಂದು ಹೇಳುತ್ತಿದ್ದರು. ಇದೀಗ ‘ನಮ್ಮ ನೀರು ತಮಿಳುನಾಡು ಹಕ್ಕು’ ಎನ್ನುತ್ತಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು.
ಚುನಾವಣೆಗೂ ಮುನ್ನ ನೀರಿಗಾಗಿ ಹೋರಾಟ ಮಾಡಿದವರು ಈಗ ಏನು ಮಾಡುತ್ತಿದ್ದಾರೆ? ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ನಮ್ಮವರು ವಾದವನ್ನೇ ಮಾಡಿಲ್ಲ. ನನಗೂ ಒಂದು ಬಾರಿ ಪೆನ್ ಕೊಡಿ ಎಂದು ಕೇಳಿದ್ದು ಇದಕ್ಕಾ ಎಂದು ಪ್ರಶ್ನಿಸಿದರು.
ಸರ್ಕಾರ ನಡೆಸುವವರಿಗೆ ರೈತರು ಹಾಗೂ ಕುಡಿಯುವ ನೀರಿನ ಬಗ್ಗೆ ಸರಿಯಾದ ಮಾಹಿತಿ ಇರಬೇಕಿತ್ತು. ಬೆಂಗಳೂರಿನ ಕುಡಿಯುವ ನೀರಿಗೂ ಸಮಸ್ಯೆ ಆಗಲಿದೆ. ನಮ್ಮ ರೈತರ ಬೆಳೆಗೆ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಯುತ್ತಿದೆ. ಈ ಸಂಬಂಧ ನಾವೆಲ್ಲ ಹೋರಾಟ ಮಾಡಿದ ನಂತರ ಸುಪ್ರೀಂಕೋರ್ಟ್ ಮುಂದೆ ಅಪೀಲು ಹಾಕಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.