ರಾಜ್ಯ ಬಜೆಟ್​: ಕರಾವಳಿಗರ ಕನಸುಗಳೇನು?

Budget
Published on

ಆರೋಗ್ಯ, ಶಿಕ್ಷಣ ರಂಗದಲ್ಲಿ ಜಾಗತಿಕ ಮಟ್ಟದ ಹೆಸರು ಪಡೆದಿದೆ ಮಂಗಳೂರು. ವಿಮಾನ, ರೈಲು, ಹಡಗು ಸಹಿತ ಹಲವು ವಿಧದ ಸಂಪರ್ಕ ವ್ಯವಸ್ಥೆ ಹೊರತಾಗಿಯೂ ಇಲ್ಲುಂಟು. ಆದರೆ, ಐಟಿ ಸೆಕ್ಟರ್ ಇಲ್ಲ ಎನ್ನುವ ಕೊರಗು ಹಲವು

ವರ್ಷಗಳಿಂದ ಹಾಗೆಯೇ ಉಳಿದುಕೊಂಡು ಬಿಟ್ಟಿದೆ. ಇದರ ಜತೆಗೆ ವ್ಯಾಪಕ ಉದ್ಯೋಗವಕಾಶ ಕಲ್ಪಿಸುವ ಕೈಗಾರಿಕೆಗಳಿಗೆ ಉತ್ತೇಜನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ, ಕೃಷಿಯಷ್ಟೇ ಮಹತ್ವ ಪಡೆದಿರುವ ಮೀನುಗಾರಿಕೆ ಕ್ಷೇತ್ರ ಹಾಗೂ ಮೀನುಗಾರರಿಗೆ ರಿಯಾಯಿತಿ, ಸರ್ಕಾರಿ ಮೆಡಿಕಲ್ ಕಾಲೇಜು ಹಾಗೂ ಕೃಷಿ ಕಾಲೇಜು ಸ್ಥಾಪನೆ ಯೋಜನೆಗಳ ಪ್ರಸ್ತಾಪವಿದ್ದರೂ ಜಾರಿಗೆ ಬರುತ್ತಿಲ್ಲ. ಇವುಗಳೊಟ್ಟಿಗೆ ಇನ್ನೂ ಹತ್ತು ಹಲವು ಬೇಡಿಕೆಗಳು ಕರಾವಳಿಗರ ಲೀಸ್ಟ್​ನಲ್ಲಿವೆ.
  1. ಐಟಿ ಪಾರ್ಕ್ ಸ್ಥಾಪನೆ

ಮಂಗಳೂರಿನಲ್ಲಿ ಐಟಿ ಪಾರ್ಕ್ ಸ್ಥಾಪಿಸಬೇಕು ಎನ್ನುವುದು ಬಹುಕಾಲದ ಬೇಡಿಕೆ. ಇದಕ್ಕೆ ಸ್ಪಷ್ಟ ರೂಪುರೇಷೆ ಕೊಡುವ ಕೆಲಸ ಆಗಬೇಕಿದ್ದು, ಬಜೆಟ್​ನಲ್ಲಿ ಘೊಷಿಸಿ ಅನುದಾನ ಮೀಸಲಿಡಬೇಕಿದೆ.

2. ಕೈಗಾರಿಕೆಗಳಿಗೆ ಉತ್ತೇಜನ

ವ್ಯಾಪಕ ಉದ್ಯೋಗಾವಕಾಶ ಕಲ್ಪಿಸುವ ಕೈಗಾರಿಕೆ ಕ್ಷೇತ್ರ, ಹಲವು ಕಾರಣಗಳಿಂದ ಬಂದ್ ಆಗುತ್ತಿವೆ, ಕೈಗಾರಿಕೆಗಳ ಪುನಶ್ಚೇತನಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡುವುದು, ಹೊಸ ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ, ವಿದ್ಯುತ್ ದರ ಕಡಿಮೆ ಮಾಡಬೇಕೆನ್ನುವ ಬೇಡಿಕೆ ಇದೆ.

3. ಪ್ರವಾಸೋದ್ಯಮ ಅಭಿವೃದ್ಧಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶವಿದೆ. ಆದರಿಲ್ಲಿ, ಸೂಕ್ತ ಮೂಲಸೌಕರ್ಯ ಕಲ್ಪಿಸುವ ಕಾರ್ಯ ಸಾಧ್ಯವಾಗಿಲ್ಲ. ಎರಡೂ ಜಿಲ್ಲೆಗಳಲ್ಲಿ ಸುಂದರ ಬೀಚ್​ಗಳು, ಧಾರ್ವಿುಕ ಕೇಂದ್ರಗಳು, ಐತಿಹಾಸಿಕ ಕೇಂದ್ರಗಳಿದ್ದರೂ ಗೋವಾ, ಕೇರಳ ಮಾದರಿಯಲ್ಲಿ ಪ್ರವಾಸಿಗರರನ್ನು ಸೆಳೆಯುವಂಥ ಯೋಜನೆಗಳನ್ನು ರೂಪಿಸುವುದು ಸರ್ಕಾರಕ್ಕೆ ಇದುವರೆಗೆ ಸಾಧ್ಯವಾಗಿಲ್ಲ.

4. ಮೀನುಗಾರರ ಮರೆಯದಿರಿ

ಕೃಷಿಯಷ್ಟೇ ಮಹತ್ವ ಪಡೆದಿರುವ ಮೀನುಗಾರಿಕೆ ಕ್ಷೇತ್ರ ಇತ್ತೀಚಿನ ವರ್ಷಗಳಲ್ಲಿ ನಷ್ಟದಲ್ಲಿದೆ. ರೈತರ ಸಾಲ ಮನ್ನಾ ಮಾಡಿದಂತೆ ಎಲ್ಲ ಮೀನುಗಾರರ ಸಾಲ ಮನ್ನಾ ಮಾಡಬೇಕು. ನಾಡದೋಣಿ ಮೀನುಗಾರಿಕೆಗೆ ಸೀಮೆಎಣ್ಣೆ ಒದಗಿಸಬೇಕು, ಮೀನುಗಾರರಿಗೆ ಪ್ರಸ್ತುತ ಸಿಗುತ್ತಿರುವ ರಿಯಾಯಿತಿ ದರದ ಡೀಸೆಲ್ 9 ಸಾವಿರ ಲೀ.ನಿಂದ 12 ಸಾವಿರಕ್ಕೆ ಹೆಚ್ಚಿಸಬೇಕು. ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಬೇಕು ಎನ್ನುವುದು ಮೀನುಗಾರರ ಪ್ರಮುಖ ಬೇಡಿಕೆ.

6. ವಿದ್ಯುತ್ ಸಮಸ್ಯೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ರಸ್ತೆ, ವಿದ್ಯುತ್ ವಿಷಯದಲ್ಲಿ ಹೆಜ್ಜೆಗೊಂದು ತೊಂದರೆ ಇದೆ. ಸರ್ಕಾರ ವಿಶೇಷ ಯೋಜನೆಯನ್ನೇ ಜಾರಿಗೊಳಿಸಬೇಕಿದೆ. ಕೃಷಿ ಜಮೀನುಗಳಿಗೆ ಉಪ್ಪು ನೀರು ನುಗ್ಗಿ ಸಾವಿರಾರು ಎಕರೆ ಭೂಮಿ ಉಳುಮೆಗೆ ಅಯೋಗ್ಯವಾಗಿದೆ. ಉಪ್ಪು ನೀರು ನುಗ್ಗದಂತೆ ತಡೆಯಲು ಒಂದು ಸಮಗ್ರ ಶಾಶ್ವತ ಯೋಜನೆ ರೂಪಿಸಬೇಕು.

5. ಸರ್ಕಾರಿ ಮೆಡಿಕಲ್ ಕಾಲೇಜು

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಖಾಸಗಿ ಮೆಡಿಕಲ್ ಕಾಲೇಜುಗಳು ಸಾಕಷ್ಟಿವೆ. ಆದರೆ ಬಡ ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಬೇಕು ಎಂಬುದು ಹಳೇ ಡಿಮ್ಯಾಂಡ್. ಉಡುಪಿ ಜಿಲ್ಲೆಗೆ ಪೊಲೀಸ್ ತರಬೇತಿ ಅಕಾಡೆಮಿ, ಕೃಷಿ ಕಾಲೇಜು ಸ್ಥಾಪನೆ ಯೋಜನೆಗಳ ಪ್ರಸ್ತಾಪವಿದ್ದರೂ ಜಾರಿಗೆ ಬರುತ್ತಿಲ್ಲ.

ಮಂಗಳೂರಿಗೆ ಐಟಿ, ಸರ್ಕಾರ ಬೀರಬೇಕಿದೆ ದೃಷ್ಟಿ ಜಾರಿಯಾಗದ ಘೊಷಣೆಗಳು

  • ಕರಾವಳಿಗೆ ಪ್ರತ್ಯೇಕ ಮರಳು ನೀತಿ
  • ಮಳೆಗಾಲದಲ್ಲಿ ಸಮಸ್ಯೆಯಾಗುವ ಘಾಟಿ ರಸ್ತೆಗಳ ಅಭಿವೃದ್ಧಿ
  • ಘಾಟಿ ಪ್ರದೇಶದ ರೈಲು ಮಾರ್ಗದ ಕ್ಷಮತೆ ಹೆಚ್ಚಿಸುವ ಕಾಮಗಾರಿ
  • ಇನ್ನೂ ಶೈಶವಾಸ್ಥೆಯಲ್ಲಿರುವ ಪಶ್ಚಿಮ ವಾಹಿನಿ ಯೋಜನೆ
  • ಮಂಗಳೂರು ವಿಮಾನ ನಿಲ್ದಾಣ ರನ್​ವೇ ವಿಸ್ತರಣೆ
  • ಸುಲ್ತಾನ್ ಬತ್ತೇರಿಯಿಂದ ಬೆಂಗ್ರೆಗೆ ಸಂಪರ್ಕ ಕಲ್ಪಿಸುವ ತೂಗು ಸೇತುವೆ
  • ಮಣಿಪಾಲದಿಂದ ಕೊಣಾಜೆವರೆಗೆ ಹೆಲ್ತ್ ಕಾರಿಡಾರ್ ಸಾಧ್ಯತಾ ವರದಿ
  • ಮಂಗಳೂರಿನಲ್ಲಿ ರಂಗ ಮಂದಿರ ಸ್ಥಾಪನೆ
  • ಮಂಗಳೂರಿಗೆ ಬೆಂಗಳೂರು ಮಾದರಿ ಮೆಟ್ರೋ ರೈಲು ಸಾಧ್ಯತಾ ವರದಿ
  • ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರಗಳಲ್ಲಿ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ.
  • ಕುಳಾಯಿ ಹೊಸ ಮೀನುಗಾರಿಕೆ ಬಂದರಿನಲ್ಲಿ ಆಧುನಿಕ ಕರಾವಳಿ ಮೀನು ರಫ್ತು ಸ್ಥಾವರ ಸ್ಥಾಪನೆ.
  • ಮೂಲ್ಕಿಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಹಿನ್ನೀರು ಮೀನು ಮರಿ ಉತ್ಪಾದನಾ ಕೇಂದ್ರ ಸ್ಥಾಪನೆ.

ಪ್ರಮುಖ ಬೇಡಿಕೆಗಳು

  • ಪ್ಲಾಸ್ಟಿಕ್ ಪಾರ್ಕ್​ಗೆ ಅನುದಾನ
  • ಮಂಗಳೂರಿನಲ್ಲಿ ಉದ್ಯೋಗಾಧರಿತ ಕೌಶಲಾಭಿವೃದ್ಧಿ ಕೇಂದ್ರ ಸ್ಥಾಪನೆ
  • ರಾಜಧಾನಿಗೆ ಕ್ಷಿಪ್ರ ಸಂಚರಿಸಲು ಶೀಘ್ರ ಸುಧಾರಿತ ರಸ್ತೆ ನಿರ್ಮಾಣ
  • ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಪುನಶ್ಚೇತನ
  • 20-30 ಸೀಟುಗಳ ಮಿನಿ ಬಸ್​ಗಳಿಗೆ ಅನುಮತಿ
  • ಮಣಿಪಾಲ, ಬ್ರಹ್ಮಾವರ, ಕಾಪು, ಬೈಂದೂರು ಭಾಗದಲ್ಲಿ ಅಗ್ನಿಶಾಮಕ ದಳ ಠಾಣೆ
  • ಉಡುಪಿ ನಗರ ಸಹಿತ ಜಿಲ್ಲೆಗೆ ಸಮರ್ಪಕ ಕುಡಿಯುವ ನೀರಿನ ಯೋಜನೆ
  • ಅಂತರ್ಜಲ ಮಟ್ಟ ಸುಧಾರಣೆ, ಕೆರೆಗಳ ಅಭಿವೃದ್ಧಿ
  • ನವಿಲು, ಜಿಂಕೆ, ಮಂಗ, ಆನೆ ಸಹಿತ ಕಾಡುಪ್ರಾಣಿಗಳ ಹಾವಳಿ ತಡೆಗಟ್ಟಲು ಸೂಕ್ತ ಯೋಜನೆ
  • ಕೊರಗರು ಹೆಣೆಯುವ ಬುಟ್ಟಿ, ಮರ, ತೇಮೆ ಮೊದಲಾದ ಪರಿಕರಗಳು
  • ಕುಂಬಾರ ಸಮುದಾಯದ ಗುಡಿ ಕೈಗಾರಿಕೆಗೆ ಸರ್ಕಾರದಿಂದ ಮಾರುಕಟ್ಟೆ
  • ಕಡಲ್ಕೊರೆತ ತಡೆಯಲು ನೈಸರ್ಗಿಕ ಕಾಂಡ್ಲಾವನ ರೂಪಿಸಲು ಯೋಜನೆ
  • ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಜತೆ 400 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net