

ಉಡುಪಿ: ಜಗತ್ತು ಕರೊನಾ ಸಂಕಟದಲ್ಲಿ ಮುಳುಗಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯ ಲಾಕ್ಡೌನ್ ಆಗಿದೆ. ಎಲ್ಲಾ ಚಟುವಟಿಕೆಗಳಂತೆ ಮೀನುಗಾರಿಕಾ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಆಳಸಮುದ್ರ ಬೋಟ್ ಗಳು ಕಡಲಿಗೆ ಇಳಿಯುತ್ತಿಲ್ಲ. ಹಾಗಾಗಿ ಯಾಂತ್ರಿಕಬೋಟುಗಳ ಗೌಜು ಗದ್ದಲವಿಲ್ಲದೆ ಕಡಲು ಕೂಡ ಶಾಂತವಾಗಿದೆ.
ಸದ್ಯ ಪ್ರಶಾಂತ ಕಡಲಿನಲ್ಲಿ ತೇಲಿಬಂದ ಭಾರಿ ಗಾತ್ರದ ತಿಮಿಂಗಿಲ ಮೀನು ದಡ ಸೇರಿದೆ. ಉಡುಪಿಯ ಕುತ್ಪಾಡಿ ಗ್ರಾಮದ ಪಡುಕೆರೆ ಕಡಲತೀರದಲ್ಲಿ ಪತ್ತೆಯಾದ ಮೀನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ತೀರ ಪ್ರದೇಶಕ್ಕೆ ಬಂದ ತಿಮಿಂಗಿಲಕ್ಕೆ ಈಜಲು ನೀರು ಸಾಲದೆ ಅಸುನೀಗಿದೆ.
ಸುಮಾರು 25 ಅಡಿ ಉದ್ದದ ಮೀನು ತೀರ ಪ್ರದೇಶಗಳಲ್ಲಿ ಕಾಣ ಸಿಗುವುದು ತುಂಬಾನೇ ಅಪರೂಪವೆಂದು ಹೇಳಬಹುದು. ತಿನ್ನಲು ಯೋಗ್ಯವಲ್ಲದ ಈ ತಿಮಿಂಗಿಲವನ್ನು, ವಿಲೇವಾರಿ ಮಾಡಲು ಸ್ಥಳೀಯ ಪಂಚಾಯತಿಯವರು ಹರಸಾಹಸವನ್ನೇ ಪಡಬೇಕಾಯಿತು. ಜೆಸಿಬಿಯನ್ನು ತಂದು ಕಡಲ ತೀರ ಪ್ರದೇಶದಲ್ಲಿ ಹೊಂಡ ಮಾಡಿ ಈ ಬೃಹತ್ ಗಾತ್ರದ ತಿಮಿಂಗಿಲ ವನ್ನು ಹೂಳಲಾಯಿತು. (ದಿಗ್ವಿಜಯ ನ್ಯೂಸ್)