ನೀರು ಪೋಲಾಗುವುದನ್ನು ತಡೆಯಲು ಕ್ರಮ ; ಸಚಿವ ಜೆ.ಸಿ.ಮಾಧುಸ್ವಾಮಿ ಭರವಸೆ ; ಸಿ.ಎಸ್.ಪುರ ಕೆರೆಗೆ ಬಾಗಿನ

IMG-20211211-WA0078
Published on

ಗುಬ್ಬಿ : ಹಾಸನದಿಂದ ತುಮಕೂರಿನತ್ತ ಹೇಮೆ ಹರಿಯುವ ಸಾಕಷ್ಟು ಭಾಗದಲ್ಲಿ ನೀರು ಪೋಲಾಗುತ್ತಿದ್ದು, ಇದರ ತಡೆಗೆ 38 ಕಡೆ ಗೇಟ್ ನಿರ್ಮಿಸಿ ನೀರು ಉಳಿಸುವ ಕೆಲಸ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಿ.ಎಸ್.ಪುರ ಕೆರೆ ತುಂಬಿ ಹರಿದ ಹಿನ್ನೆಲೆಯಲ್ಲಿ ಶನಿವಾರ ಗಂಗಾಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ನಂತರ ಹಮ್ಮಿಕೊಂಡಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನದಿ ನೀರು ಹರಿಸಿಕೊಳ್ಳುವ ಭರದಲ್ಲಿ ಸಾಕಷ್ಟು ವ್ಯರ್ಥವಾಗುವ ಬಗ್ಗೆ ಗಂಭೀರ ಚಿಂತನೆ ಮಾಡಿ ಅಧಿಕಾರಿಗಳಿಗೆ ಸೂಚನೆ ನೀಡಿ ನೀರು ಪೋಲಾಗುವುದನ್ನು ತಡೆ ಹಿಡಿಯಬೇಕಿದೆ ಎಂದರು.

ನೆಲ ಮತ್ತು ಜಲ ಜನರಲ್ಲಿ ಬಾಂಧವ್ಯ ಬೆಸೆಯುತ್ತದೆ. ಹಳೇ ಮೈಸೂರು ಭಾಗದಲ್ಲಿ ನೀರಿನ ಮಹತ್ವ ಅರಿತು ಹೇಮೆ ಹರಿಸುವ ಯೋಜನೆ ಕಾರ್ಯರೂಪಕ್ಕೆ ಬಂತು. ತೀರಾ ಸಂಕಷ್ಟದಲ್ಲಿದ್ದ ತುಮಕೂರು ಜಿಲ್ಲೆಗೆ ಹೇಮಾವತಿ ಜೀವ ಜಲವಾಯಿತು. ಈ ನೀರು 7 ಲಕ್ಷ ಹೆಕ್ಟೇರ್ ಭೂಮಿ ಉಳಿಸುವ ಯೋಜನೆಯಾಗಿ ನಂತರದಲ್ಲಿ 5 ಲಕ್ಷಕ್ಕೆ ಸೀಮಿತವಾಯಿತು, ಈಗ 3.80 ಲಕ್ಷ ಹೆಕ್ಟೇರ್‌ಗೆ ಮಾತ್ರ ಬಳಕೆಗೆ ಮುಡಿಪಾಗಿದೆ. ಈ ನಿಟ್ಟಿನಲ್ಲಿ ಕುಡಿಯುವ ನೀರಿಗೆ ನೀರು ಉಳಿಸಿ ಮಿಕ್ಕ ನೀರು ಕೃಷಿಗೆ ಕೊಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರು ದೀರ್ಘಾವಧಿ ಬೆಳೆಗೆ ಕಡಿವಾಣ ಹಾಕಿ ಎರಡರಿಂದ ಮೂರು ತಿಂಗಳ ಬೆಳೆ ಬೆಳೆಯಬೇಕು ಎಂದು ಮನವಿ ಮಾಡಿದರು.

ಮಾಜಿ ಸಚಿವ ಎಸ್.ಶಿವಣ್ಣ ಮಾತನಾಡಿ, ಜಿಲ್ಲೆಗೆ ಭಗೀರಥನ ರೀತಿ ಬಂದ ಮಾಧುಸ್ವಾಮಿ ಅವರು ಕೈಗೆತ್ತಿಕೊಂಡ ಯೋಜನೆಗಳಿಂದ ಮುಂದಿನ ದಿನಗಳಲ್ಲಿ ಜಿಲ್ಲೆಗೆ ನೀರಿನ ಹಾಹಾಕಾರ ತಪ್ಪುತ್ತದೆ. ರಾಜಕಾರಣಕ್ಕೆ ದುರ್ಬಳಕೆಯಾಗಿದ್ದ ಹೇಮೆ ನೀರು ಸದ್ಬಳಕೆ ಬಗ್ಗೆ ಜನರಿಗೆ ತಿಳಿಸಿದ ಸಚಿವರ ಕಾನೂನು ಬದ್ಧ ಕೆಲಸ ಜನ ಮನ್ನಣೆ ಗಳಿಸಿದೆ ಎಂದರು.

ತುರುವೇಕೆರೆ ಶಾಸಕ ಮಸಾಲಾ ಜಯರಾಮ್ ಮಾತನಾಡಿ, ರಾಜಕೀಯ ಪುನರ್ಜನ್ಮ ನೀಡುವ ಕೆಲಸ ನೀರು ಹರಿಸುವುದಾಗಿದೆ. ಈ ಕೆಲಸಕ್ಕೆ ಸಚಿವ ಮಾಧುಸ್ವಾಮಿ ಅವರ ಆಶೀರ್ವಾದ ಕಾರಣ. ನೂರರಷ್ಟು ಕೆರೆ-ಕಟ್ಟೆಗಳು ಹೇಮೆಯಿಂದ ತುಂಬಿದ್ದು, ಮುಂದಿನ ದಿನದಲ್ಲಿ ನೀರು ಸರಾಗವಾಗಿ ಹರಿಯಲು ನಾಲೆ ವಿಸ್ತರಣೆ ಯೋಜನೆಗೆ 1050 ಕೋಟಿ ರೂಪಾಯಿ ಮಂಜೂರಿಗೆ ಸಚಿವರು ಸಮ್ಮತಿಸಿದ್ದಾರೆ. ಈ ಹಿಂದೆ ಮಂಜೂರು ಮಾಡಿದ್ದ 650 ಕೋಟಿ ರೂಪಾಯಿ ಪೈಪ್‌ಲೈನ್ ಯೋಜನೆ ಕೈಬಿಟ್ಟು ನಾಲೆ ಮೂಲಕವೇ ಎಲ್ಲರಿಗೂ ನೀರು ನೀಡುವ ಕೆಲಸ ಮಾಡಿದರು. ಮುಂದೆ 2500 ಕ್ಯೂಸೆಕ್ ನೀರು ನಾಲೆಯಲ್ಲಿ ಹರಿದು ಜಿಲ್ಲೆಗೆ ಸಾಕಷ್ಟು ನೀರು ಬರಲಿದೆ ಎಂದರು.

ಸಚಿವರು ಹಾಗೂ ಶಾಸಕರನ್ನು ಗ್ರಾಮಸ್ಥರು ಸನ್ಮಾನಿಸಿದರು. ಮುಖಂಡರಾದ ಕೊಂಡಜ್ಜಿ ವಿಶ್ವನಾಥ್, ಸಿದ್ದರಾಮಯ್ಯ, ಭಾನುಪ್ರಕಾಶ್, ಮಹೇಶ್, ಶಿವಲಿಂಗೇಗೌಡ, ಹಿಂಡಿಸ್ಕೆರೆ ಗ್ರಾಪಂ ಅಧ್ಯಕ್ಷ ಪ್ರಕಾಶ್, ಮದುವೆಮನೆ ಕುಮಾರ್, ಸದಾಶಿವಕುಮಾರ್ ಇತರರು ಇದ್ದರು.

ನಿರೀಕ್ಷೆಯಂತೆ ನೀರು ಜಿಲ್ಲೆಗೆ ಸಿಗಲಿಲ್ಲ: ಹಿರಿಯ ಮುತ್ಸದ್ಧಿ ದೇವೇಗೌಡರಿಂದ ನಿರೀಕ್ಷೆಯಂತೆ ನೀರು ಜಿಲ್ಲೆಗೆ ಸಿಗಲಿಲ್ಲ. ಇದಕ್ಕೆ ತಕ್ಕ ಉತ್ತರ ಜನರು ನೀಡಿದ್ದರು. ಈ ನಿಟ್ಟಿನಲ್ಲಿ ಜವಾಬ್ದಾರಿ ಅರಿತು ಜಿಲ್ಲೆಗೆ ನೀರು ಹರಿಸುವ ಕೆಲಸ ನಿಯಾಮಾನುಸಾರ ನಡೆಸಿ ಮೂರು ಜಿಲ್ಲೆಗೆ ನ್ಯಾಯ ಒದಗಿಸಿದೆ. ರೈತರಿಗೆ ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ನೆರವಾದ ಶಾಸಕ ಜಯರಾಮ್ ಅವರನ್ನು ಮತ್ತೊಮ್ಮೆ ಕ್ಷೇತ್ರದ ಜನತೆ ಗೆಲ್ಲಿಸಬೇಕು ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net