ಮಿಶ್ರ ಬೇಸಾಯಕ್ಕೆ ಸೂಕ್ತ ಮಲೆನಾಡ ಮಣ್ಣು

Farmar Training Programe
Published on

ಶಿರಸಿ: ಮಲೆನಾಡಿನ ಮಣ್ಣಿನ ಗುಣ ಮಿಶ್ರ ಬೆಳೆ ಬೇಸಾಯಕ್ಕೆ ಪೂರಕವಾಗಿದೆ. ಒಂದೇ ಕೃಷಿ ಕ್ಷೇತ್ರದಲ್ಲಿ ಹಲವು ವಿಧದ ಬೆಳೆ ಬೆಳೆಯುವುದರಿಂದ ದರ ಕುಸಿತ, ರೋಗ ಬಾಧೆ ಸಮಸ್ಯೆ ಉಂಟಾದರೂ ರೈತರ ಜೀವನಕ್ಕೆ ತೊಂದರೆ ಆಗುವುದಿಲ್ಲ. ಈ ನಿಟ್ಟಿನಲ್ಲಿ ರೈತರು ಚಿಂತನೆ ನಡೆಸಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ನಗರದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರದಿಂದ ಆಯೋಜಿಸಲಾದ ರೈತರ ತರಬೇತಿ ಶಿಬಿರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಹೈನುಗಾರಿಕೆ ಮತ್ತು ಕೃಷಿ ಒಂದಕ್ಕೊಂದು ಪೂರಕ. ಒಂದು ಕಾಲದಲ್ಲಿ ನೂರಾರು ಹಸು ಎತ್ತು ಇದ್ದ ಕೊಟ್ಟಿಗೆಯಲ್ಲಿ ಇಂದು ಒಂದೆರಡು ಹಸುಗಳು ಮಾತ್ರ ಕಾಣಿಸುತ್ತಿದೆ. ಮಲೆನಾಡಿನಲ್ಲಿ ಹೈನುಗಾರಿಕೆ ಕಡಿಮೆ ಆಗುತ್ತಿದೆ. ಇದರ ಪರಿಣಾಮವಾಗಿ ರಾಸಾಯನಿಕ ಗೊಬ್ಬರದ ಮೇಲೆ ಅವಲಂಬನೆ ಜಾಸ್ತಿಯಾಗುತ್ತಿದ್ದು, ಇದು ಒಳ್ಳೆಯ ಬೆಳವಣಿಗೆಯಲ್ಲ. ರಾಸಾಯನಿಕ ಗೊಬ್ಬರಗಳನ್ನು ಬೆಳೆಗಳಿಗೆ ಹಾಕುವುದರಿಂದ ಆಹಾರದ ಮೂಲಕ ರಾಸಾಯನಿಕ ನಮ್ಮ ದೇಹಕ್ಕೆ ಸೇರುತ್ತಿದೆ. ಸಾವಯವ, ಎರೆ ಹುಳು ಗೊಬ್ಬರ ಬಳಸುವ ಅಂದಿನ ದಿನಗಳಲ್ಲಿ ಮನುಷ್ಯನ ಆರೋಗ್ಯ ಉತ್ತಮವಾಗಿರುತ್ತಿತ್ತಲ್ಲದೇ ಬೆಳೆಗಳಿಗೂ ಈಗಿನಂತೆ ರೋಗ ಬಾಧೆ ಇರಲಿಲ್ಲ ಎಂದು ಭೀಮಣ್ಣ ನಾಯ್ಕ ಅಭಿಪ್ರಾಯಪಟ್ಟರು. ನಮ್ಮ ತಾಲೂಕಿನಲ್ಲಿ ಮಳೆ ಪ್ರಮಾಣ ವರ್ಷದಿಂದ ವರ್ಷಕ್ಕೆ ಬದಲಾದರೂ ಬೆಳೆಗಳಿಗೆ ನೀರಿನ ನಿರ್ವಹಣೆ ಸಮರ್ಪಕವಾಗಿ ಮಾಡಿ, ಮಿಶ್ರ ಬೇಸಾಯ ಮಾಡಿದರೆ ತೊಂದರೆ ಆಗಲಾರದು ಎಂದರು.

ಯಾವುದೇ ಕೃಷಿಯನ್ನು ನಾವು ಹುಟ್ಟುವಾಗ ಕಲಿತುಕೊಂಡು ಬಂದಿರುವುದಿಲ್ಲ. ಕೃಷಿಯ ಕಲಿಯುವಿಕೆ ಅಚ್ಚುಕಟ್ಟಾಗಿ ಇರದಿದ್ದರೆ ಜೀವನದಲ್ಲಿ ಶಿಸ್ತನ್ನು ಕಲಿಯಲು ಸಾಧ್ಯವಿಲ್ಲ. ಕೃಷಿ ಕಾರ್ಯಕ್ರಮಗಳಲ್ಲಿ ನಾನು ಶಾಸಕನಾಗದೇ ಕೃಷಿಕನಾಗಿಯೇ ಭಾಗವಹಿಸಿ, ನಾನೂ ಹೊಸತನ್ನು ಕಲಿಯುವ ಯತ್ನ ನಡೆಸುತ್ತೇನೆ. ಕೃಷಿ ಸಾಧನೆಯ ಚಲ ಹೊಂದಿ ಗುರಿ ಮುಟ್ಟಲು ನಾವು ಯತ್ನಿಸಬೇಕು. ರೈತರೇ ಈ ದೇಶದ ಸಂಪತ್ತಾಗಿದ್ದಾರೆ ಎಂದರು.

ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಕೆ. ಎಂ. ಮೋಹನಕುಮಾರ ಮಾತನಾಡಿ, ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದ್ದರೂ ರೈತರಿಗೆ ಕಾಲ ಕಾಲಕ್ಕೆ ಅಗತ್ಯ ಮಾಹಿತಿ, ಲಸಿಕೆ ನೀಡುತ್ತಿದ್ದೇವೆ. ಕೃಷಿ ಜೊತೆ ಹೈನುಗಾರಿಕೆಯನ್ನೂ ಮಾಡುವ ಮೂಲಕ ರೈತರು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು ಎಂದರು.

ಕೃಷಿ ವಿಜ್ಞಾನಿಗಳಾದ ಡಾ. ರೂಪಾ ಪಾಟೀಲ, ಡಾ. ಗಣೇಶ ಹೆಗಡೆ ಇತರರಿದ್ದರು. ಇದೇ ವೇಳೆ 21ನೇ ಜಾನುವಾರಿ ಗಣತಿಯ ಮಾಹಿತಿ ಪತ್ರವನ್ನು ಶಾಸಕ ಭೀಮಣ್ಣ ಅನಾವರಣಗೊಳಿಸಿದರು.

ಧ್ವನಿ ಮುದ್ರಿತ ರೈತಗೀತೆಗೆ ಶಾಸಕ ಗರಂ

ಕಾರ್ಯಕ್ರಮದ ಆರಂಭದಲ್ಲಿ ರೈತಗೀತೆಯನ್ನು ಕಂಪ್ಯೂಟರ್ ಮೂಲಕ ಧ್ವನಿ ಮುದ್ರಿತ ಹಾಡು ಹಚ್ಚಿದ್ದರಿಂದ ಶಾಸಕ ಭೀಮಣ್ಣ ನಾಯ್ಕ ಗರಂ ಆದರು. ರೈತರ ಕಾರ್ಯಕ್ರಮ ಇದಾಗಿದ್ದು, ವಾರಗಳ ಕಾಲ ತಯಾರಿ ನಡೆಸಲಾಗಿದೆ. ರೈತ ಗೀತೆಯನ್ನು ಅಥವಾ ನಾಡಗೀತೆಯನ್ನು ಧ್ವನಿ ಮುದ್ರಿತವಾಗಿ ಎಂದಿಗೂ ನುಡಿಸಬಾರದು. ರೈತರೇ ಈ ಗೀತೆ ಹಾಡಬಹುದಿತ್ತು ಎಂದು ಸಲಹೆ ನೀಡಿದ ಅವರು, ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆಗಳನ್ನು ಸಹಿಸುವುದಿಲ್ಲ ಎಂದು ಸಂಘಟಕರಿಗೆ ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net