

ನೆಲಮಂಗಲ: ಪಾಶ್ಚಿಮಾತ್ಯ ಸಂಸ್ಕೃತಿ ಅನುಕರಣೆ ಮಾಡಿ ಮಗುವಿಗೆ ಎದೆಹಾಲು ನೀಡುವುದನ್ನು ಬಿಡದಿರಿ ಎಂದು ರೋಟರಿ ಇನ್ನರ್‌ವ್ಹೀಲ್ ಅಧ್ಯಕ್ಷೆ ಮಂಜುಳಾ ಸಿದ್ದರಾಜು ಬಾಣಂತಿಯರಿಗೆ ಕಿವಿಮಾತು ಹೇಳಿದರು.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಟರಿ ಇನ್ನರ್‌ವ್ಹೀಲ್ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಸ್ತನಪಾನ ಸಪ್ತಾಹ ಪ್ರಯುಕ್ತ ಬಾಣಂತಿಯರಿಗೆ ಅಗತ್ಯ ವಸ್ತುಗಳನ್ನು ವಿತರಿಸಿ ಮಾತನಾಡಿದರು.
ಸರ್ಕಾರ ಹಾಗೂ ಕೆಲ ಸರ್ಕಾರೇತರ ಸಂಘಸಂಸ್ಥೆಗಳು ಗರ್ಭಿಣಿ, ಬಾಣಂತಿಯರಿಗೆ ಹಾಗೂ ಮಗುವಿನ ಬೆಳವಣಿಗೆಗೆ ಅನೇಕ ಯೋಜನೆ ಕೈಗೊಂಡಿದೆ. ಸರ್ಕಾರದ ಮಾತೃಶ್ರಿ ಯೋಜನೆ ಗರ್ಭಿಣಿ, ಬಾಣಂತಿಯರಿಗೆ ಹೆಚ್ಚು ಸಹಕಾರಿಯಾಗುತ್ತಿದೆ. ಮಗು ಜನಿಸುವ ಮೊದಲ ಮೂರು ತಿಂಗಳು ಜನಿಸಿದ ನಂತರ ಮೂರು ತಿಂಗಳು ತಾಯಂದಿರಿಗೆ ಅಂಗನವಾಡಿ ಕೇಂದ್ರದ ಮೂಲಕ ಪೌಷ್ಟಿಕಾಂಶ ಆಹಾರ ನೀಡುವುದರ ಜತೆಗೆ ಆರೋಗ್ಯದ ಕುರಿತಾಗಿ ಮಾಹಿತಿ ನೀಡಲಾಗುತ್ತದೆ ಎಂದರು.
ಸ್ತ್ರೀರೋಗ ತಜ್ಞೆ ಡಾ.ಸೋನಿಯಾ ಮಾತನಾಡಿ, ಮಗುವಿನ ಆರೋಗ್ಯದ ದೃಷ್ಟಿಯಿಂದ ಉತ್ತಮ ಆಹಾರ ಸೇವನೆ ಮಾಡಬೇಕು. ಮಗು ಜನಿಸಿದ ಅರ್ಧಗಂಟೆಯೊಳಗೆ ಎದೆಹಾಲು ಉಣಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಿದರು. ರೋಟರಿ ಇನ್ನರ್‌ವ್ಹೀಲ್ ಸಂಸ್ಥೆ ಕಾರ್ಯದರ್ಶಿ ದಿವ್ಯಾ, ನಿಕಟಪೂರ್ವ ಅಧ್ಯಕ್ಷೆ ಶಾರದಾ ಸುಂದರೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ಪುಷ್ಪಾ, ವೈದ್ಯ ನಾಗೇಶ್ ಮತ್ತಿತರರಿದ್ದರು.
ವೈದ್ಯರಿಗೆ ಸನ್ಮಾನ: ತಾಲೂಕು ಆರೋಗ್ಯಾಧಿಕಾರಿ ಡಾ.ಹರೀಶ್, ಸ್ತ್ರೀರೋಗ ತಜ್ಞೆ ಡಾ.ಸೋನಿಯಾ ಅವರನ್ನು ರೋಟರಿ ಇನ್ನರ್‌ವ್ಹೀಲ್‌ನಿಂದ ಸನ್ಮಾನಿಸಲಾಯಿತು.ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿದ್ದ ಸುಮಾರು 20ಕ್ಕೂ ಹೆಚ್ಚು ಬಾಣಂತಿಯರಿಗೆ ಶಾಲು, ಹಣ್ಣು, ಬ್ರೆಡ್ ಸೇರಿ ಅಗತ್ಯವಸ್ತುಗಳನ್ನು ವಿತರಣೆ ಮಾಡಲಾಯಿತು.