ಕೇರಳದಲ್ಲಿ ತಲ್ಲಣ ಸೃಷ್ಟಿಸುತ್ತಿರುವ ವೆಸ್ಟ್ ನೈಲ್ ಜ್ವರ

fevar
Published on

| ಅವಿನಾಶ್ ಜೈನಹಳ್ಳಿ ಮೈಸೂರು

ಎಲ್ಲೆಡೆ ತಲ್ಲಣ ಸೃಷ್ಟಿಸಿರುವ ವೆಸ್ಟ್ ನೈಲ್ ವೈರಸ್(ಡಬ್ಲ್ಯುಎನ್​ವಿ) ಇದೀಗ ನೆರೆಯ ಕೇರಳ ರಾಜ್ಯಕ್ಕೂ ಕಾಲಿಟ್ಟಿದೆ. ಪರಿಣಾಮ ಗಡಿ ಜಿಲ್ಲೆಯಲ್ಲಿ ಅಲರ್ಟ್ ಘೊಷಿಸಲಾಗಿದೆ. ಜಿಲ್ಲಾದ್ಯಂತ ಆಸ್ಪತ್ರೆಗಳಿಗೆ ಚಿಕಿತ್ಸೆಗೆ ಬರುವ ರೋಗಿಗಳ ಮೇಲೆ ತೀವ್ರ ನಿಗಾ ಇರಿಸಲಾಗಿದೆ.

ನಿಫಾ, ಹಕ್ಕಿಜ್ವರ, ಹಂದಿಜ್ವರ, ಜಿಕಾ ವೈರಸ್ ಹಾಗೂ ಕರೊನಾ ಮಹಾಮಾರಿ ಮರೆಯಾಯಿತು ಎನ್ನುವಷ್ಟರಲ್ಲಿ ಇದೀಗ ವೆಸ್ಟ್ ನೈಲ್ ಜ್ವರದ ಭೀತಿ ಕಾಡುತ್ತಿದೆ. ಕೇರಳ ರಾಜ್ಯದಲ್ಲಿ ಇದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಎಚ್.ಡಿ.ಕೋಟೆ ತಾಲೂಕಿನ ಬಾವಲಿ ಚೆಕ್​ಪೋಸ್ಟ್​ನಲ್ಲಿ ಆರೋಗ್ಯಾಧಿಕಾರಿಗಳು ಕಟ್ಟೆಚ್ಚರ ವಹಿಸಿದ್ದಾರೆ. ಗಡಿಯೊಳಗೆ ಬಂದು ಹೋಗುವ ವಾಹನಗಳ ಸವಾರರ ಮೇಲೆ ನಿಗಾ ಇರಿಸಿದ್ದಾರೆ. ಆರೋಗ್ಯ ಇಲಾಖೆ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.

ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಪಿ.ಸಿ. ಕುಮಾರಸ್ವಾಮಿ ನೇತೃತ್ವದಲ್ಲಿ ಎಚ್.ಡಿ. ಕೋಟೆ ತಾಲೂಕು ಸೇರಿದಂತೆ ಜಿಲ್ಲಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕೆಲಸವೂ ನಡೆಯುತ್ತಿದೆ. ಗಡಿ ಭಾಗದ ಹಲವರಲ್ಲಿ ಆರೋಗ್ಯದ ಸಮಸ್ಯೆ ಕಾಣಿಸಿಕೊಂಡಿದ್ದು, ಜ್ವರ, ತಲೆನೋವು, ಶೀತದಿಂದ ರೋಗಿಗಳು ಬಳಲುತ್ತಿದ್ದಾರೆ. ಪರೀಕ್ಷೆಗಾಗಿ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್ ರವಾನಿಸಲಾಗಿದೆ. ವೆಸ್ಟ್ ನೈಲ್ ವೈರಸ್(ಡಬ್ಲ್ಯುಎನ್​ವಿ) ಕೇರಳದ ಮಲಪ್ಪುರಂ, ಕೋಯಿಕ್ಕೋಡ್ ಮತ್ತು ತ್ರಿಶ್ಶೂರ್ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದೆ. ಕೇರಳ ರಾಜ್ಯದಲ್ಲಿ ಕಳೆದ ವಾರ 12 ಖಚಿತ ಮತ್ತು 4 ಶಂಕಿತ ಪ್ರಕರಣಗಳು ವರದಿಯಾಗಿವೆ. ಜಗತ್ತಿನ ಅನೇಕ ಭಾಗಗಳಲ್ಲಿ ವೆಸ್ಟ್ ನೈಲ್ ವೈರಸ್ ಹರಡುತ್ತಿದೆ. ಅಂಟಾರ್ಟಿಕಾ ಹೊರತುಪಡಿಸಿ ಪ್ರತಿ ಖಂಡದಲ್ಲಿಯೂ ಮನುಷ್ಯರಲ್ಲಿ ಸೋಂಕು ಉಂಟಾಗುತ್ತಿದೆ. ದೇಶದಲ್ಲಿ ಮೊದಲ ಪ್ರಕರಣ ಕೇರಳದಲ್ಲಿ ಕಂಡುಬಂದಿದೆ.

ಸೋಂಕಿನ ಲಕ್ಷಣಗಳು : ವೆಸ್ಟ್ ನೈಲ್ ಸೋಂಕಿನ ಲಕ್ಷಣಗಳೆಂದರೆ ಅಧಿಕ ಜ್ವರ, ತಲೆನೋವು, ಕುತ್ತಿಗೆ ಬಿಗಿತ, ಮೂರ್ಛೆ ಹೋದಂತೆ ಆಗುವುದು, ದಿಗಮೆಗೊಳ್ಳುವುದು, ಕೋಮಾ, ನಡುಕ, ಸೆಳೆತ, ಸ್ನಾಯು ದೌರ್ಬಲ್ಯ, ದೃಷ್ಟಿ ನಷ್ಟ, ಮರಗಟ್ಟುವಿಕೆ ಮತ್ತು ಪಾರ್ಶ್ವವಾಯು ಆಗಿವೆ. ಈ ರೋಗ ಶೇ.80ರಷ್ಟು ಜನರಲ್ಲಿ ಲಕ್ಷಣರಹಿತವಾಗಿದ್ದರೆ, ಕೆಲವರಲ್ಲಿ ಜ್ವರ, ತಲೆನೋವು, ಆಯಾಸ, ದೇಹದ ನೋವು, ವಾಕರಿಕೆ, ದದ್ದು ಮತ್ತು ಊದಿಕೊಂಡ ಗ್ರಂಥಿಗಳಂತಹ ಲಕ್ಷಣ ಕಂಡುಬರುತ್ತದೆ. ವೆಸ್ಟ್ ನೈಲ್ ಸೋಂಕಿಗೆ ಒಳಗಾದ ಸುಮಾರು 150 ಜನರಲ್ಲಿ ಒಬ್ಬರು ಹೆಚ್ಚು ತೀವ್ರ ಅಸ್ವಸ್ಥತೆ ಹೊಂದಿರುತ್ತಾರೆ. ತೀವ್ರ ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಕೆಲ ವಾರ ಬೇಕಾಗಬಹುದು.

ವೆಸ್ಟ್ ನೈಲ್ ವೈರಸ್ ಎಂದರೇನು?: ವೆಸ್ಟ್ ನೈಲ್ ವೈರಸ್ ಸೊಳ್ಳೆಯಿಂದ ಹರಡುವ ಏಕತಂತು ಆರ್​ಎನ್​ಎ ವೈರಸ್ ಆಗಿದೆ. ಇದು ಫ್ಲೇವಿವೈರಸ್, ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹಳದಿ ಜ್ವರ ಉಂಟು ಮಾಡುವ ವೈರಸ್​ಗಳಿಗೆ ಸಂಬಂಧಿಸಿದ್ದಾಗಿದೆ. ಕ್ಯೂಲೆಕ್ಸ್ ಜಾತಿಯ ಸೊಳ್ಳೆಗಳು ಸೋಂಕು ಪ್ರಸರಣಕ್ಕೆ ಪ್ರಮುಖ ಕಾರಣಗಳಾಗಿರುತ್ತವೆ. ಸೋಂಕಿತ ಸೊಳ್ಳೆಗಳು ಪಕ್ಷಿಗಳು ಸೇರಿದಂತೆ ಮನುಷ್ಯರು, ಪ್ರಾಣಿಗಳಲ್ಲಿ ರೋಗ ಹರಡುತ್ತವೆ.

ನೆರೆಯ ಕೇರಳದಲ್ಲಿ ವೆಸ್ಟ್​ನೈಲ್ ಜ್ವರ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಕೇರಳದೊಂದಿಗೆ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಘೊಷಣೆ ಮಾಡಿದೆ. ಈ ಜ್ವರ ಮಾರಣಾಂತಿಕವಲ್ಲ. ಹಾಗಾಗಿ ಜನರು ಆತಂಕಕ್ಕೆ ಒಳಗಾಗಬಾರದು. ಸಾಮಾನ್ಯ ಜ್ವರಕ್ಕೆ ನೀಡುವಂತೆ ವೆಸ್ಟ್ ನೈಲ್ ಜ್ವರಕ್ಕೂ ಚಿಕಿತ್ಸೆ ನೀಡಲಾಗುತ್ತದೆ. |ಡಾ ಪಿ.ಸಿ.ಕುಮಾರಸ್ವಾಮಿ ಆರೋಗ್ಯಾಧಿಕಾರಿ ಮೈಸೂರು

ಸುರಕ್ಷತಾ ಕ್ರಮ ಹೇಗೆ? 

. ವೆಸ್ಟ್ ನೈಲ್ ಸೋಂಕಿಗೆ ಯಾವುದೇ ನಿರ್ದಿಷ್ಟ ಲಸಿಕೆ ಅಥವಾ ವಿಶೇಷ ಚಿಕಿತ್ಸೆ ಇಲ್ಲ. ಆದರೆ ಸೊಳ್ಳೆ ಕಡಿತದಿಂದ ರಕ್ಷಣೆ ಪಡೆಯುವುದೇ ಇರುವ ಮಾರ್ಗ.

.ಹೊರಾಂಗಣದಲ್ಲಿ ಇರುವಾಗ ಉದ್ದನೆಯ ತೋಳಿನ ಅಂಗಿ ಮತ್ತು ಪ್ಯಾಂಟ್​ಗಳನ್ನು ಧರಿಸಬೇಕು.

. ಮುಂಜಾನೆ ಮತ್ತು ಮುಸ್ಸಂಜೆ ದೇಹವನ್ನು ಸಾಧ್ಯವಾದಷ್ಟು ಹೆಚ್ಚು ಮುಚ್ಚಿಕೊಳ್ಳಬೇಕು. ಮನೆ ಸುತ್ತಲೂ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ಸ್ವಚ್ಛತೆಗೆ ಆದ್ಯತೆ ನೀಡಬೇಕು.

. ತಲೆನೋವು, ವಾಂತಿ-ಭೇದಿಯಂತಹ ಸಮಸ್ಯೆಗಳು ಕಂಡುಬಂದಾಗ ನಿರ್ಲಕ್ಷಿಸದೆ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net