

ಮೈಸೂರು: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ್ ಶಹಜಹಾನ್ ನಿರಂತರವಾಗಿ 10 ವರ್ಷ ಗಳಿಂದ ಹಿಂದು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿದರೂ ಪಶ್ಚಿಮ ಬಂಗಾಳ ಸರ್ಕಾರ ಆರೋಪಿಯ ಬೆಂಬಲಕ್ಕೆ ನಿಂತಿದೆ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಮಾಳವಿಕ ಅವಿನಾಶ್ ಆಕ್ರೋಶ ವ್ಯಕ್ತಪಡಿಸಿದರು.
ನಗರದ ಸಿಎಫ್‌ಟಿಆರ್‌ಐ ಬಳಿಯ ಶ್ರೀ ಸತ್ಯ ಪ್ರಮೋದ ಕಲ್ಯಾಣ ಮಂಟಪದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಾರಿ ಶಕ್ತಿ ವಂದನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೇಖ್ ಶಹಜಹಾನ್ ದಲಿತ ಮಹಿಳೆಯರ ಮೇಲೆ ನಿರಂತರ ಅತ್ಯಾಚಾರ ನಡೆಸುತ್ತಿರುವ ವಿಚಾರ ತಿಳಿದರೂ ಒಂದು ಹೆಣ್ಣಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸಮರ್ಥಿಸಿಕೊಳ್ಳುವುದು ಸರಿಯಲ್ಲ. ಪಶ್ಚಿಮಬಂಗಾಳ ಪೊಲೀಸರು ನೊಂದ ಮಹಿಳೆಯರ ಪರವಾಗಿ ನಿಲ್ಲದೆ ಅವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಶ್ಚಿಮ ಬಂಗಾಳ ಸರ್ಕಾರ ಮಹಿಳೆಯರಿಗೆ ರಕ್ಷೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಧ್ವನಿ ಎತ್ತುತ್ತಿದೆ. ಮಹಿಳೆಯರಿಗೆ ರಕ್ಷಣೆ ನೀಡುವಲ್ಲಿ ಹಾಗೂ ಅವರಿಗೆ ಗೌರವಯುತ ಬದುಕು ರೂಪಿಸಿಕೊಡುವಲ್ಲಿ ಕೇಂದ್ರ ಸರ್ಕಾರ ಸದಾ ಮುಂದಿದೆ ಎಂದರು.
ಕೇಂದ್ರ ಸರ್ಕಾರ ಮಹಿಳೆಯರಿಗೆ ಲೋಕಸಭೆ ಹಾಗೂ ವಿಧಾನಸಭೆಯಲ್ಲಿ ಶೇ.33 ಮೀಸಲಾತಿ ಕಲ್ಪಿಸಿದ್ದು, ಆ ಮೂಲಕ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಕ್ಷೇತ್ರಕ್ಕೆ ಬರಲು ಅವಕಾಶ ಮಾಡಿಕೊಟ್ಟಿದೆ. ಮಹಿಳೆಯರು ಅಡುಗೆ ಮನೆಯ ಹೊಗೆಯಿಂದ ಮುಕ್ತವಾಗಬೇಕು ಎಂಬ ಉದ್ದೇಶದಿಂದ ಉಜ್ವಲ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದರು. ಹೆಣ್ಣು ಮಕ್ಕಳು ಯಾವುದೇ ಆತಂಕ ಇಲ್ಲದೆ ತಮ್ಮ ನಿತ್ಯಕರ್ಮಗಳನ್ನು ಮುಗಿಸಿಕೊಳ್ಳಲು ಕೇಂದ್ರ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ 11 ಕೋಟಿ ಶೌಚಗೃಹ ನಿರ್ಮಿಸಿದೆ. ಈ ರೀತಿ ಮಹಿಳೆಯರಿಗೋಸ್ಕರ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಜನರ ಬದುಕು ಬದಲಾಗುವುದಿಲ್ಲ. ಪ್ರತಿ ತಿಂಗಳು ಮಹಿಳೆಯರಿಗೆ 2 ಸಾವಿರ ರೂ. ನೀಡುವುದರಿಂದ ಅಥವಾ ಉಚಿತ ವಿದ್ಯುತ್ ನೀಡುವುದರಿಂದ ಜನರ ಸಂಕಷ್ಟಗಳು ಪರಿಹಾರವಾಗುವುದಿಲ್ಲ. ಇದನ್ನು ಅರಿತು ಪ್ರಧಾನಿ ನರೇಂದ್ರ ಮೋದಿ ಅವರು ಜನರ ಬದುಕು ಬದಲಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ತಲುಪಲು ಕೇಂದ್ರ ಸರ್ಕಾರದ ಜನ್‌ಧನ್ ಯೋಜನೆ ಪ್ರಮುಖ ಕಾರಣ. ಒಂದುವೇಳೆ ಜನ್‌ಧನ್ ಖಾತೆ ತೆರೆಯದೆ ಇದ್ದರೆ ಹಲವಾರು ಮಹಿಳೆಯರಿಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಲಾಭ ಪಡೆದುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು.
ಮುದ್ರ, ಸ್ವನಿಧಿ, ವಿಶ್ವಕರ್ಮ ಯೋಜನೆ ಮೂಲಕ ಸಣ್ಣಪುಟ್ಟ ವರ್ತಕರಿಗೆ 10 ಲಕ್ಷ ರೂ. ಸಾಲ ನೀಡಲಾಗುತ್ತಿದೆ. ಈ ಸಾಲಕ್ಕೆ ಮೋದಿಯೇ ಗ್ಯಾರಂಟಿ. ಈ ಯೋಜನೆಯಡಿ ಹಲವಾರು ವರ್ತಕರು ಸಾಲ ಪಡೆದು ವ್ಯಾಪಾರ ವಹಿವಾಟು ಪ್ರಾರಂಭಿಸಿ ಸ್ವಾವಲಂಬಿ ಬದುಕು ರೂಪಿಸಿಕೊಂಡಿದ್ದಾರೆ ಎಂದರು.
ಭಾರತ 2047ಕ್ಕೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಬೇಕು ಎಂಬ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ. ಈ ಸಂಕಲ್ಪ ಸಾಕಾರಗೊಳಿಸಲು ದೇಶದ ಎಲ್ಲರಿಂದಲೂ ಮೋದಿ ಸಲಹೆ ಪಡೆಯುತ್ತಿದ್ದಾರೆ. ಮೋದಿ ಚುನಾವಣಾ ಸಂದರ್ಭದಲ್ಲಿ ನೀಡಿದ ಶೇ.99 ಭರವಸೆಗಳನ್ನು ಈಡೇರಿಸಿದ್ದಾರೆ. ರಾಜ್ಯ ವಿಧಾನಸಭೆಯಲ್ಲಿ ನಾವು ಸೋತಿದ್ದೇವೆ, ಹಾಗಂತ ನಾವು ದೃತಿಗೆಡುವ ಅವಶ್ಯಕತೆ ಇಲ್ಲ. ಮುಂದಿನ ಬಾರಿಯೂ ನರೇಂದ್ರ ಮೋದಿ ಪ್ರಧಾನಿಯಾಗುವುದು ನಿಶ್ಚಿತ. ಮೋದಿಯನ್ನು ಗೆಲ್ಲಿಸುವ ಮೂಲಕ ಭಾರತವನ್ನು ವಿಶ್ವಗುರುವಾಗಿ ಮಾಡೋಣ ಎಂದು ಕರೆ ನೀಡಿದರು.
ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾ ಹಮ್ಮಿಕೊಂಡಿದ್ದ ‘ನಾರಿ ಶಕ್ತಿ ವಂದನೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಭಾಷಣವನ್ನು ಈ ಸಂದರ್ಭ ನೇರ ಪ್ರಸಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ನಾರಿಶಕ್ತಿ ವಂದನ್ ಅಭಿಯಾನದ ಪ್ರಭಾರಿ ಹೇಮ ನಂದೀಶ್ ಹಾಗೂ ಇತರರು ಇದ್ದರು.