ವೆನ್ಲಾಕ್ 8 ತಿಂಗಳಲ್ಲಿ 1 ಸಾವಿರ ಹೃದಯ ಚಿಕಿತ್ಸಾ ಪ್ರಕ್ರಿಯೆ

ವೆನ್ಹಾಕ್ ಜಿಲ್ಲಾಸ್ಪತ್ರೆ
ವೆನ್ಹಾಕ್ ಜಿಲ್ಲಾಸ್ಪತ್ರೆ
Published on
ಮಂಗಳೂರು : ನಗರದ ಸರ್ಕಾರಿ ವೆನ್ಹಾಕ್ ಜಿಲ್ಲಾಸ್ಪತ್ರೆಯಲ್ಲಿ ಕೆಎಂಸಿ ಮಂಗಳೂರು ಸಹಯೋಗದೊಂದಿಗೆ ಎಂಟು ತಿಂಗಳ ಹಿಂದೆ ಆರಂಭವಾದ ಕ್ಯಾಥ್ ಲ್ಯಾಬ್‌ನಲ್ಲಿ 1 ಸಾವಿರ ಯಶಸ್ವಿ ಹೃದಯ ಚಿಕಿತ್ಸಾ ಪ್ರಕ್ರಿಯೆ ನಡೆಸಲಾಗಿದೆ. ಸಾರ್ವಜನಿಕ-ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ 2025ರ ಸೆ.21ರಂದು ಆರಂಭವಾದ ಈ ಕ್ಯಾಥ್ ಲ್ಯಾಬ್ ಶೀಘ್ರ ಅವಧಿಯಲ್ಲಿ ಮಹತ್ವದ ಸಾಧನೆ ಮಾಡಿರುವುದು ಸರ್ಕಾರಿ ಆಸ್ಪತ್ರೆಗೆ ಹೆಮ್ಮೆಯ ವಿಷಯವಾಗಿದೆ.
ಕರಾವಳಿ ಕರ್ನಾಟಕ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ಉನ್ನತ ಮಟ್ಟದ ಹೃದಯ ಚಿಕಿತ್ಸೆ ಒದಗಿಸುವಲ್ಲಿ ವೆನ್ಲಾಕ್‌ನ ಈ ಕ್ಯಾಥ್ ಲ್ಯಾಬ್ ಯಶಸ್ವಿಯಾಗಿದೆ. ಈ ಸೌಲಭ್ಯ ಆರಂಭಕ್ಕೂ ಮೊದಲು, ಹೃದಯದ ಸಮಸ್ಯೆ ಸಂಬಂಧಿಸಿ ತುರ್ತು ಸ್ಥಿತಿಯಲ್ಲಿದ್ದ ರೋಗಿಗಳು ದೂರದ ಆಸ್ಪತ್ರೆಗಳಿಗೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ತೆರಳಬೇಕಾಗುತ್ತಿತ್ತು. ರೋಗಿಯ ಆರ್ಥಿಕ ಸ್ಥಿತಿ ಯಾವುದೇ ಇರಲಿ, ಸಮಯೋಚಿತ, ಕೈಗೆಟುಕುವ ಮತ್ತು ವಿಶ್ವಮಟ್ಟದ ಹೃದಯ ಚಿಕಿತ್ಸೆಯನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಲಾಗಿತ್ತು.
ವೆನ್ಲಾಕ್‌ನ ಅತ್ಯಾಧುನಿಕ ಕ್ಯಾಥ್ ಲ್ಯಾಬ್‌ನಲ್ಲಿ ಸರ್ಕಾರಿ ವೈದ್ಯರು ಮತ್ತು ಕೆಎಂಸಿಯ ತಜ್ಞರು ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಉನ್ನತ ಮಟ್ಟದ ಹೃದಯ ಚಿಕಿತ್ಸೆಗಳು ಕಡಿಮೆ ವೆಚ್ಚದಲ್ಲಿ ಲಭ್ಯವಿದೆ. ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಜೀವ ರಕ್ಷಕ ಚಿಕಿತ್ಸೆಗಳು ದೊರೆಯುತ್ತಿವೆ. ಬಿಪಿಎಲ್ ಫಲಾನುಭವಿಗಳಿಗೆ ಕೊರೋನರಿ ಅಂಜಿಯೋಗ್ರಫಿ ಸಂಪೂರ್ಣ ಉಚಿತವಾಗಿದೆ. ಆಯುಷ್ಮಾನ್ ಭಾರತ್ ಮುಂತಾದ ಸರ್ಕಾರಿ ಯೋಜನೆಗಳು ಹೆಚ್ಚಿನ ಜನರಿಗೆ ಈ ಸೇವೆಗಳನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಿವೆ.
ಕೊರೋನರಿ ಅಂಜಿಯೋಗ್ರಫಿ, ಪ್ರೈಮರಿ ಅಂಜಿಯೋಪ್ಲಾಸ್ಟಿ, ಆಯ್ಕೆಯ ಅಂಜಿಯೋಪ್ಲಾಸ್ಟಿ, ಸಂಕೀರ್ಣ ಕೊರೋನರಿ ಮಧ್ಯಸ್ಥಿಕೆಗಳು, ಕ್ರಾನಿಕ್ ಟೋಟಲ್ ಅಕ್ಯೂಷನ್ ಚಿಕಿತ್ಸೆ, ತೀವ್ರ ಹೃದಯಾಘಾತದ ನಿರ್ವಹಣೆ, ತಾತ್ಕಾಲಿಕ ಪೇಸ್ ಮೇಕರ್ ಅಳವಡಿಕೆ, ತುರ್ತು ಕೊರೋನರಿ ಮಧ್ಯಸ್ಥಿಕೆಗಳು ಸಹಿತ ತುರ್ತು ಹೃದಯ ಸೇವೆಗಳನ್ನು ಇಲ್ಲಿ ನೀಡಲಾಗುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net