ವೆನ್ಲಾಕ್‌ಗೆ 300 ಹೆಚ್ಚುವರಿ ಆಕ್ಸಿಜನ್‌ಯುಕ್ತ ಬೆಡ್

Ashwath Narayan
Published on

ಮಂಗಳೂರು: ವೆನ್ಲಾಕ್ ಜಿಲ್ಲಾಸ್ಪತ್ರೆ, ತಾಲೂಕು ಹಾಗೂ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಮ್ಲಜನಕಯುಕ್ತ ಬೆಡ್‌ಗಳ ಸಂಖ್ಯೆ ಕೂಡಲೇ ಹೆಚ್ಚಿಸಬೇಕು ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಸೂಚಿಸಿದ್ದಾರೆ.

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್-19 ಪ್ರಕರಣ ಕುರಿತು ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡುವ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉಪಸ್ಥಿತಿಯಲ್ಲಿ ವಿಕಾಸಸೌಧದಲ್ಲಿ ಶುಕ್ರವಾರ ತುರ್ತು ಸಭೆ ಬಳಿಕ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮತ್ತಿತರ ಅಧಿಕಾರಿಗಳ ಜತೆ ವಿಡಿಯೋ ಸಂವಾದ ನಡೆಸಿದರು.

ವೆನ್ಲಾಕ್ ಆಸ್ಪತ್ರೆಯಲ್ಲಿ ಈಗಾಗಲೇ 150 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇದ್ದರೂ ಸಾಲದು. ದಿನಂಪ್ರತಿ ಸೋಂಕಿತರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವ್ಯವಸ್ಥೆ ಬಲಗೊಳಿಸುವುದು ತುರ್ತು ಅಗತ್ಯ. ಆಕ್ಸಿಜನ್‌ಯುಕ್ತ ಬೆಡ್‌ಗಳ ಸಂಖ್ಯೆಯನ್ನು 450ಕ್ಕೆ ಏರಿಸುವ ಕುರಿತ ಪ್ರಸ್ತಾವನೆಯನ್ನು ಆರೋಗ್ಯ ಇಲಾಖೆ ಆಯುಕ್ತರಿಗೆ ಕಳಿಸಿ. ಶೀಘ್ರ ಮಂಜೂರಾತಿ ಕೊಡಿಸುತ್ತೇನೆ. ಜತೆಗೆ ಜಿಲ್ಲೆಯ ಎಲ್ಲ ತಾಲೂಕು ಆಸ್ಪತ್ರೆಗಳಲ್ಲೂ ಇಂತಹ ಬೆಡ್ ವ್ಯವಸ್ಥೆ ಆಗಬೇಕು ಎಂದು ಸೂಚಿಸಿದರು.

ಕೋವಿಡ್ ಚಿಕಿತ್ಸೆ ಉಚಿತ: ಸರ್ಕಾರಿ, ಖಾಸಗಿ ಸಹಿತ ಯಾವುದೇ ಆಸ್ಪತ್ರೆಯಲ್ಲಿ ಸರ್ಕಾರದಿಂದ ಶಿಫಾರಸು ಪಡೆದ ರೋಗಿಗಳಿಗೆ ಚಿಕಿತ್ಸೆ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಿಗೆ ಆ ವೆಚ್ಚವನ್ನು ಸರ್ಕಾರವೇ ಭರಿಸುತ್ತದೆ. ಯಾವ ಆಸ್ಪತ್ರೆಯವರು ಕೂಡ ರೋಗಿಗಳಿಂದ ಹಣ ಪಡೆಯುವಂತಿಲ್ಲ. ಮುಖ್ಯವಾಗಿ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ರೋಗಿಗಳನ್ನು ನೇರವಾಗಿ ಚಿಕಿತ್ಸೆ ಲಭ್ಯವಿರುವ ಆಸ್ಪತ್ರೆಗಳಿಗೆ ಕಳುಹಿಸಬೇಕು. ರೋಗಿಗಳನ್ನು ಅಲೆದಾಡಿಸಬಾರದು. ಆಸ್ಪತ್ರೆಗೆ ಬರುವ ರೋಗಿಗೆ ಕೂಡಲೇ ಬೆಡ್ ಹಂಚಿಕೆಯಾಗಬೇಕು ಎಂದು ಡಿಸಿಎಂ ನಿರ್ದೇಶಿಸಿದರು.

ವಿಡಿಯೋ ಕಾನ್ಫರೆನ್ಸ್‌ನಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಹರೀಶ್ ಪೂಂಜ, ಯು.ಟಿ.ಖಾದರ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರತ್ನಾಕರ್ ಮತ್ತಿತರರಿದ್ದರು.

ಖಾಸಗಿ ಆಸ್ಪತ್ರೆಗಳ ಬೆಡ್ ವಶ: ಜಿಲ್ಲೆಯಲ್ಲಿ 8 ವೈದ್ಯಕೀಯ ಕಾಲೇಜುಗಳು ಹಾಗೂ ಸಾಕಷ್ಟು ಖಾಸಗಿ ಆಸ್ಪತ್ರೆಗಳಿವೆ. ಹೀಗೆ ಕಾಲೇಜು, ಸರ್ಕಾರಿ- ಖಾಸಗಿ ಆಸ್ಪತ್ರೆ ಸೇರಿ 8 ಸಾವಿರಕ್ಕೂ ಅಧಿಕ ಬೆಡ್‌ಗಳಿದ್ದು, ತಕ್ಷಣ ಅವುಗಳನ್ನು ಸರ್ಕಾರದ ವಶಕ್ಕೆ ಪಡೆಯಬೇಕು. ತಕ್ಷಣ ಸಂಬಂಧಪಟ್ಟ ಆಸ್ಪತ್ರೆ ಆಡಳಿತ ಮಂಡಳಿಗಳ ಜತೆ ಮಾತನಾಡಿ ಅಗ್ರಿಮೆಂಟ್ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಡಿಸಿಎಂ ಸೂಚಿಸಿದರು. ಜಿಲ್ಲೆಯ ಕೋವಿಡ್ ಕೇರ್ ಸೆಂಟರುಗಳಲ್ಲಿ 250 ಹಾಸಿಗೆಗಳು ಸಿದ್ಧವಾಗಿದ್ದು, ಕೆಲವೇ ದಿನಗಳಲ್ಲಿ 3,800 ಹಾಸಿಗೆಗಳು ಲಭ್ಯವಾಗಲಿವೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ಬೆರಳತುದಿಯಲ್ಲಿ ಮಾಹಿತಿ

ಕೋವಿಡ್ ಪರಿಣಾಮಕಾರಿ ನಿರ್ವಹಣೆಗೆ ಡ್ಯಾಷ್‌ಬೋರ್ಡ್ ವ್ಯವಸ್ಥೆ ಉತ್ತಮಪಡಿಸಿಕೊಳ್ಳಿ. ಎಲ್ಲಿ ಬೆಡ್‌ಗಳಿವೆ? ರೋಗಿಗಳು ಎಷ್ಟಿದ್ದಾರೆ? ಮೂಲಸೌಕರ್ಯಗಳ ವ್ಯವಸ್ಥೆ ಇತ್ಯಾದಿ ಮಾಹಿತಿ ಡ್ಯಾಷ್‌ಬೋರ್ಡ್‌ನಲ್ಲೇ ಸಿಗಬೇಕು. ನಾನ್ ಕೋವಿಡ್ ರೋಗಿಗಳಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಸಿಗಬೇಕು. ಸೆಂಟ್ರಲೈಸ್ಡ್ ರಿಪೋರ್ಟಿಂಗ್ ಸಿಸ್ಟಂ ಅಳವಡಿಸಿಕೊಳ್ಳಬೇಕು ಎಂದು ಉಪ ಮುಖ್ಯಮಂತ್ರಿ ಹೇಳಿದರು.

25 ಸಾವಿರ ಆ್ಯಂಟಿಜನ್ ಕಿಟ್

ಜಿಲ್ಲೆಯಲ್ಲಿ ಕರೊನಾ ತ್ವರಿತ ತಪಾಸಣೆಗೆ 25 ಸಾವಿರ ರ‌್ಯಾಪಿಡ್ ಆ್ಯಂಟಿಜನ್ ಟೆಸ್ಟಿಂಗ್ ಕಿಟ್‌ಗಳನ್ನು ತಕ್ಷಣ ಸರಬರಾಜು ಮಾಡಲಾಗುವುದು. ಜತೆಗೆ 15 ಹೊಸ ಆ್ಯಂಬುಲೆನ್ಸ್‌ಗೂ ಮಂಜೂರಾತಿ ನೀಡಲಾಗುವುದು ಎಂದು ಡಿಸಿಎಂ ಭರವಸೆ ನೀಡಿದ್ದಾರೆ.

ಜಿಲ್ಲೆಯಲ್ಲಿ ಸದ್ಯಕ್ಕೆ 59 ಆಂಬುಲೆನ್ಸ್‌ಗಳಿದ್ದು, ಮತ್ತಷ್ಟು ಖರೀದಿಸಿ, ಹೆಚ್ಚುವರಿಯಾಗಿ ಚಾಲಕರನ್ನು ನೇಮಿಸಿಕೊಳ್ಳಿ. ಊಟ, ಔಷಧ, ಪಿಪಿಇ ಕಿಟ್ ಕೊರತೆಯಾಗದಂತೆ ನೋಡಿಕೊಳ್ಳಿ. ಹೋಂಕೇರ್ ಬಗ್ಗೆ ಮತ್ತಷ್ಟು ಅರಿವು ಮೂಡಿಸಿ. ಸೋಂಕಿತರ ಪರೀಕ್ಷೆಯ ಪ್ರಮಾಣ ಹೆಚ್ಚಿಸಿ ಎಂದು ಸೂಚಿಸಿದರು. ಸದ್ಯಕ್ಕೆ ದಿನಕ್ಕೆ 750 ಟೆಸ್ಟ್ ಆಗುತ್ತಿದ್ದು, ಈವರೆಗೂ 38 ಸಾವಿರ ಜನರಿಗೆ ಪರೀಕ್ಷೆ ಮಾಡಲಾಗಿದೆ ಎಂದು ಡಿಸಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net