ವೆನ್ಲಾಕ್ ಭರ್ತಿಯಾದರೆ ಖಾಸಗಿಗೆ ಶಿಫ್ಟ್

Nalin Kumar 24 Dec 19
Nalin Kumar
Published on

ಮಂಗಳೂರು: ಜಿಲ್ಲೆಯಲ್ಲಿ ಕರೊನಾ ರೋಗಿಗಳ ಸಂಖ್ಯೆ ಏರಿಕೆಯಲ್ಲಿರುವುದರಿಂದ ವೆನ್ಲಾಕ್ ಸಾಮರ್ಥ್ಯ ಮೀರುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳಲ್ಲೂ ಹೆಚ್ಚುವರಿ ಬೆಡ್‌ಗಳನ್ನು ಕಾದಿರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ಆರೋಗ್ಯ ಇಲಾಖೆಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೋವಿಡ್-19 ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದರು.

ನಿವೃತ್ತಿ ಹೊಂದಿದ ಎಂಬಿಬಿಎಸ್ ಅಥವಾ ಆಯುಷ್ ವೈದ್ಯಾಧಿಕಾರಿಗಳನ್ನು ಸರ್ಕಾರದ ಮಾರ್ಗಸೂಚಿ ಅನುಸಾರ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಬಹುದು. ನರ್ಸಿಂಗ್ ಸಿಬ್ಬಂದಿ ಕೊರತೆಯಾದರೆ ಖಾಸಗಿ ನರ್ಸಿಂಗ್ ಕಾಲೇಜುಗಳ ವಿದ್ಯಾರ್ಥಿಗಳ ಸೇವೆಯನ್ನು ಪಡೆಯಲು ಕ್ರಮ ಕೈಗೊಳ್ಳಬೇಕು. ಅಗತ್ಯ ಇದ್ದರೆ ಮೆಡಿಕಲ್ ಕಾಲೇಜುಗಳಿಂದ ಬಾಡಿಗೆಗೆ ಹೆಚ್ಚುವರಿ ಆಂಬುಲೆನ್ಸ್ ಪಡೆದುಕೊಳ್ಳಬೇಕು. ಖಾಸಗಿ ಆಸ್ಪತ್ರೆಗಳು ಕರೊನಾ ರೋಗಿಯ ಸ್ಥಿತಿಗತಿ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ. ರೂಪಾ ಮತ್ತಿತರರಿದ್ದರು.

ಶವಸಂಸ್ಕಾರಕ್ಕೆ ಅನ್ಯರು ಹಾಜರಾದರೆ ಕೇಸು: ಕರೊನಾದಿಂದ ಮೃತರ ಶವಸಂಸ್ಕಾರ ಮಾಡುವಾಗ ಸರ್ಕಾರದ ಮಾರ್ಗಸೂಚಿಯಂತೆ ಪಿಪಿಇ ಕಿಟ್ ಧರಿಸಿರುವ, ಸಂಬಂಧಪಟ್ಟ ಸಿಬ್ಬಂದಿ ಮಾತ್ರ ಪಾಲ್ಗೊಳ್ಳಬೇಕು. ಅನ್ಯ ವ್ಯಕ್ತಿಗಳಿಗೆ ಅಲ್ಲಿ ಹಾಜರಿರಲು ಅವಕಾಶ ನೀಡಬಾರದು. ಅಂತವರ ವಿರುದ್ಧ ಕೇಸು ದಾಖಲಿಸಬೇಕು ಎಂದು ನಳಿನ್ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net