

ಮಂಗಳೂರು : ಸ್ವಯಂ ಸೇವಾ ಸಂಸ್ಥೆಗಳ ಮಾನವೀಯ ಸೇವೆ ಸಮಾಜಕ್ಕೆ ಆಶಾಕಿರಣವಾಗಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಆರ್ ಜೈನ್ ಹೇಳಿದರು.
ನಗರದ ವೆನ್ಲಾಕ್ ಆಸ್ಪತ್ರೆಯ ಲಯನ್ಸ್ ಲಿಂಬ್ ಸೆಂಟರ್ ಮತ್ತು ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ದ.ಕ.ಜಿಲ್ಲಾ ಘಟಕ ಗುರುವಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡಾ ವತಿಯಿಂದ ಮೂವರು ಫಲಾನುಭವಿಗಳಿಗೆ ಕೃತಕ ಕಾಲು ವಿತರಿಸಿ ಮಾತನಾಡಿದ ಅವರು ಇಂತಹ ಸೇವಾ ಕಾರ್ಯಗಳು ನೊಂದವರ ಪಾಲಿಗೆ ವರದಾನವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಆಫ್ ಬರೋಡಾದ ಪ್ರಧಾನ ವ್ಯವಸ್ಥಾಪಕಿ ಹಾಗೂ ವಲಯ ಮುಖ್ಯಸ್ಥರಾದ
ಗಾಯತ್ರಿ ಆರ್. ಮಾತನಾಡಿ ‘ ಸಮಾಜಮುಖಿ ಕಾರ್ಯಗಳಿಗೆ ಬ್ಯಾಂಕ್ ಆಫ್ ಬರೋಡಾ ತನ್ನ ಸಾಮಾಜಿಕ ಜವಾಬ್ದಾರಿ ನಿಧಿಯಿಂದ ನೆರವು ನೀಡಲು ಸದಾ ಸಿದ್ಧವಿದೆ ಎಂದರು.
ಬ್ಯಾಂಕ್ ಆಫ್ ಬರೋಡಾದ ಮಂಗಳೂರು ನಗರ ಪ್ರಾದೇಶಿಕ ವ್ಯವಸ್ಥಾಪಕ ಎಂ.ವಿ.ಎಸ್. ಪ್ರಸಾದ್, ಉದ್ಯಮಿ ಸಾಂಬಶಿವರಾವ್ , ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಮುಖ್ಯ ಅತಿಥಿಗಳಾಗಿದ್ದರು. ರೆಡ್‌ಕ್ರಾಸ್ ಸೊಸೈಟಿಯ ನಿರ್ದೇಶಕ ಪಿ.ಬಿ.ಹರೀಶ್ ರೈ ಪ್ರಾಸ್ತಾವಿಕವಾಗಿ ಮಾತನಾಡಿದರು. ಖಜಾಂಜಿ ಮೋಹನ್ ಶೆಟ್ಟಿ, ನಿರ್ದೇಶಕ ರವೀಂದ್ರನಾಥ ಉಚಿಲ, ಸದಸ್ಯರಾದ ಭಾಸ್ಕರ ರೈ ಕಟ್ಟ, ರಾಜೇಶ್ ದಡ್ಡಂಗಡಿ , ಲಯನ್ಸ್ ಲಿಂಬ್ ಸೆಂಟರ್‌ನ ಮ್ಯಾನೇಜರ್ ಸುರೇಶ್ ಶೆಟ್ಟಿ ಉಪಸ್ಥಿತರಿದ್ದರು. ಬಿ.ಎನ್.ಪುಷ್ಪರಾಜ್ ಕಾರ್ಯಕ್ರಮ ನಿರೂಪಿಸಿದರು.