ಕರೊನಾ ಆಸ್ಪತ್ರೆ ಘೋಷಣೆ ಮಾಡಿರಷ್ಟೇ ಸಾಕೆ?

wenlock
Published on

- ವೇಣುವಿನೋದ್ ಕೆ.ಎಸ್.ಮಂಗಳೂರು

ಕರೊನಾ ವಿರುದ್ಧ ಹೋರಾಟಕ್ಕೆ ಅಣಿಯಾದ ಜಿಲ್ಲಾಡಳಿತ ವೆನ್ಲಾಕ್ ಆಸ್ಪತ್ರೆಯನ್ನೇನೋ ಪ್ರತ್ಯೇಕ ಕರೊನಾ ಆಸ್ಪತ್ರೆ ಎಂದು ಘೋಷಿಸಿದೆ, ಅದರಿಂದ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ, ಇದನ್ನು ಪೂರ್ತಿಯಾಗಿ ಕರೊನಾ ರೋಗಿಗಳಿಗೆ ಮೀಸಲಿಡುವುದಾಗಿ ಹೇಳಿದೆ.

ಆದರೆ ಇಷ್ಟು ಮಾಡಿದರೆ ಸಾಕೆ? ಅನೇಕ ಅವಶ್ಯಕ ಸೌಲಭ್ಯಗಳೂ ಬೇಕಾಗುತ್ತವೆ.

ವೆನ್ಲಾಕ್‌ನ ಸೂಪರ್ ಸ್ಪೆಷಾಲಿಟಿ ವಾರ್ಡ್‌ಗಳಿರುವ ಕಟ್ಟಡಕ್ಕೆ ಪಾಸಿಟಿವ್ ಕೇಸ್‌ಗಳನ್ನು ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ, ಲಭ್ಯ ಮಾಹಿತಿಯಂತೆ ಇನ್ನೂ ಅಲ್ಲಿ ಹಲವು ರೀತಿಯ ಸೌಲಭ್ಯಗಳು ಬರಬೇಕಿದೆ. ಏರ್‌ಕಂಡಿಷನಿಂಗ್ ವ್ಯವಸ್ಥೆ ಅಗತ್ಯವಾಗಿ ಬೇಕು, ಕೇವಲ ವಿಂಡೋ ಎಸಿಯಿಂದ ಉಪಯೋಗವಿಲ್ಲ, ಅದರ ಜೊತೆಗೆ ಏರ್ ಎಕ್ಸ್‌ಚೇಂಜ್, ಲ್ಯಾಮಿನಾರ್ ಏರ್‌ಫ್ಲೋ, ಹೆಪಾ ಫಿಲ್ಟರ್ ಇತ್ಯಾದಿಗಳು ಬೇಕಾಗುತ್ತವೆ. ಸದ್ಯ ಜಾಗವನ್ನಷ್ಟೇ ತೋರಿಸಲಾಗಿದೆ ಎನ್ನುತ್ತವೆ ಮೂಲಗಳು.

ಈ ಮೇಲಿನ ಸೌಲಭ್ಯಗಳಿಲ್ಲದೆ ಸಾಧಾರಣ ತಾಪಮಾನದಲ್ಲೇ ರೋಗಿಗಳನ್ನಿರಿಸಿ ಚಿಕಿತ್ಸೆ ನೀಡುವುದು ಕಷ್ಟ. ಸಾಧಾರಣ ತಾಪಮಾನದಲ್ಲಿ ಪಿಪಿಇ ಕವಚವನ್ನು ತೊಟ್ಟ ವೈದ್ಯಕೀಯ ಸಿಬ್ಬಂದಿ ಉಷ್ಣತೆ ಹೆಚ್ಚಾಗಿ ಕುಸಿಯುವ ಸಾಧ್ಯತೆ ಹೆಚ್ಚು. ಪ್ರಸ್ತುತ ವೆನ್ಲಾಕ್‌ನಲ್ಲಿ ಪಾಸಿಟಿವ್ ಇರುವವರಿಗೆ ಆಯುಷ್ ಬ್ಲಾಕ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಎಸಿ ಇಲ್ಲದೆಯೇ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಏನು ಮಾಡಬಹುದು ?: ಪ್ರಸ್ತುತ ಕೊವಿಡ್ ಪಾಸಿಟಿವ್ ರೋಗಿಗಳ ಸಂಖ್ಯೆ ಕಡಿಮೆ ಇರುವುದರಿಂದ ಅವರನ್ನು ಅತ್ಯಾಧುನಿಕ ಮಕ್ಕಳ ಆಸ್ಪತ್ರೆ ಆರ್‌ಎಪಿಸಿಸಿಗೆ ವರ್ಗಾಯಿಸಬಹುದು. ಅದನ್ನು ಕ್ರಿಟಿಕಲ್ ಕೇರ್ ವಿಭಾಗವಾಗಿ ಪರಿವರ್ತಿಸಿಕೊಳ್ಳಬಹುದು. ಅಲ್ಲಿ ಮೇಲೆ ಹೇಳಲಾದ ಐಸಿಐ ವಿತ್ ಹೆಪಾ ಫಿಲ್ಟರ್, ಏರ್ ಎಕ್ಸ್‌ಚೇಂಜ್‌ನಂತಹ ಅತ್ಯಾಧುನಿಕ ಸೌಲಭ್ಯವಿದೆ. 10ರಿಂದ 12ರಷ್ಟು ವೆಂಟಿಲೇಟರ್ ಹಾಸಿಗೆಗಳನ್ನು 2-3 ದಿನದಲ್ಲಿ ಸಿದ್ಧಪಡಿಸಿಕೊಳ್ಳಬಹುದು. ಅಲ್ಲಿ ಅಗತ್ಯವಿರುವವರಿಗೆ ಚಿಕಿತ್ಸೆ ನೀಡುತ್ತಿರುವಂತೆಯೇ ಸೂಪರ್ ಸ್ಪೆಷಾಲಿಟಿ ಬ್ಲಾಕನ್ನು ಸಕಲ ಸೌಲಭ್ಯಗ ಳೊಂದಿಗೆ ಸಿದ್ಧಪಡಿಸಲು ಸಮಯವೂ ಸಿಗುತ್ತದೆ ಎನ್ನುತ್ತಾರೆ ಸಮುದಾಯ ರೋಗಗಳ ಚಿಕಿತ್ಸಾ ತಜ್ಞ ಡಾ.ಶಾಂತಾರಾಮ ಬಾಳಿಗ.

ಶಿಫ್ಟಿಂಗ್ ಬಹುತೇಕ ಪೂರ್ಣ: ಈ ನಡುವೆ ವೆನ್ಲಾಕ್‌ನಲ್ಲಿ ಕರೊನಾ ಹೊರತಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಹುತೇಕ ಮಂದಿಯನ್ನು ಡಿಸ್‌ಚಾರ್ಜ್ ಮಾಡಿ ಮನೆಗೆ ಕಳುಹಿಸಲಾಗಿದೆ. ಚಿಕಿತ್ಸೆ ಮುಂದುವರಿಸಬೇಕಾದ ಮಂದಿಯನ್ನು ಮಾತ್ರವೇ ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ. ಹಳೇ ಎಲ್ಲ ವಾರ್ಡ್‌ಗಳನ್ನೂ ಶುಚಿಗೊಳಿಸಿ ಅಗತ್ಯವಿದ್ದರೆ ಕೊವಿಡ್ ರೋಗಿಗಳಿಗೆ ಬಳಸಿಕೊಳ್ಳಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಬ್ಲಾಕ್ ತೆರವಿಗೆ ಖಾಸಗಿ ಆಸ್ಪತ್ರೆ ಒತ್ತಡ!: ಕೇರಳ ಕಡೆಯಿಂದ ಕರೊನಾ ರೋಗಿಗಳು ಹೆಚ್ಚು ಮಂಗಳೂರಿಗೆ ಬರುತ್ತಿದ್ದಾರೆ. ಇಲ್ಲಿ ಹರಡುವ ಭೀತಿ ಎದುರಾಗಿರುವುದರಿಂದ ಸದ್ಯ ತಲಪಾಡಿಯಿಂದೀಚೆಗೆ ಬರದಂತೆ ರೋಗಿಗಳನ್ನು ತಡೆಹಿಡಿಯಲಾಗಿದೆ. ಆದರೆ, ಇದರಿಂದ ಕೆಲವು ಖಾಸಗಿ ಆಸ್ಪತ್ರೆಗಳಿಗೆ ಬಿಸಿ ತಟ್ಟಿರುವುದು ನಿಜ. ಅನೇಕ ಆಸ್ಪತ್ರೆಗಳಿಗೆ ರೋಗಿಗಳು ಬರುವುದೇ ಕೇರಳದಿಂದ. ಅವರನ್ನು ತಡೆದರೆ ಇಲ್ಲಿ ರೋಗಿಗಳೇ ಇಲ್ಲವಾಗುತ್ತಾರೆ. ಹಾಗಾಗಿ ಆಸ್ಪತ್ರೆಯೊಂದು ಜಿಲ್ಲಾಡಳಿತಕ್ಕೆ ಪತ್ರ ಬರೆದು ತಮಗೆ ಕೇರಳದಿಂದ ಹೆಚ್ಚು ರೋಗಿಗಳು ಬರುತ್ತಿದ್ದಾರೆ, ಬರುವುದಕ್ಕೆ ಅನುಮತಿ ಕೊಡಬೇಕು ಎಂದು ವಿನಂತಿ ಮಾಡಿರುವುದು ತಿಳಿದುಬಂದಿದೆ. ಇತರ ಖಾಸಗಿ ಆಸ್ಪತ್ರೆಗಳಿಗೂ ಈ ಆಸ್ಪತ್ರೆ ಮುಖ್ಯಸ್ಥರು ಜಿಲ್ಲಾಡಳಿತದ ಮೇಲೆ ಒತ್ತಡ ಹೇರುವಂತೆ ಕೇಳಿಕೊಂಡಿದ್ದಾರೆ. ಆದರೆ ಇತರ ಆಸ್ಪತ್ರೆಯವರು ಇಂತಹ ಸಂದರ್ಭದಲ್ಲಿ ಅದು ಸರಿಯಲ್ಲ ಎಂದು ಹೇಳಿರುವುದಾಗಿ ತಿಳಿದುಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net