ಮನೆಗೆ ನುಗ್ಗಿ ಚಿನ್ನಾಭರಣ ಕಳವು

theft
Published on


ಉಳ್ಳಾಲ: ಪ್ರತ್ಯೇಕ ಪ್ರಕರಣಗಳಲ್ಲಿ ಎರಡು ಮನೆಗಳಿಗೆ ನುಗ್ಗಿರುವ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಪ್ರಕರಣ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬುಧವಾರ ಮನೆಗೆ ಬೀಗ ಹಾಕಿ ಕುಟುಂಬಸ್ಥರೊಂದಿಗೆ ಉಡುಪಿಗೆ ಹೋಗಿದ್ದ ಸೋಮೇಶ್ವರ ನಿವಾಸಿ ಅರ್ಚನಾ ಅವರ ಮನೆಗೆ ನುಗ್ಗಿದ ಕಳ್ಳರು 26 ಗ್ರಾಂ ಚಿನ್ನ ಮತ್ತು ಮೂರು ಸಾವಿರ ನಗದು ದೋಚಿದ್ದಾರೆ. ಗುರುವಾರ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಕಳ್ಳರು ಮನೆಯ ಮುಂಬಾಗಿಲನ್ನು ಒಡೆದು ಒಳನುಗ್ಗಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಮೇಲಂಗಡಿಯ ಪ್ರಸಾದ್ ಅವರ ಮನೆಗೆ ನುಗ್ಗಿದ ಕಳ್ಳರು ನಗ ನಗದು ಕಳವು ಮಾಡಿದ್ದಾರೆ. ಪ್ರಸಾದ್ ಆಡಳಿತದಲ್ಲಿರುವ ದೈವಸ್ಥಾನದ ಕಾಣಿಕೆ ಡಬ್ಬಿಯಿಂದ ಹಣ ಕಳವು ಮಾಡಿದ ಕಳ್ಳರು, ಪ್ರಸಾದ್ ಅವರ ಮನೆಯ ಹಿಂಬಾಗಿಲ ಮೂಲಕ ಒಳ ನುಗ್ಗಿದ್ದಾರೆ. ಮನೆ ಮಂದಿ ಇರುವಾಗಲೇ ಕಳ್ಳರು ಕೈಚಳಕ ತೋರಿದ್ದು, 56 ಗ್ರಾಂ ಚಿನ್ನ ಹಾಗೂ ಎರಡು ಮೊಬೈಲ್‌ಗಳನ್ನು ಕಳವುಗೈದಿದ್ದಾರೆ. ಎರಡು ಪ್ರಕರಣಗಳ ಕುರಿತು ಉಳ್ಳಾಲ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net