ಬಾವಿ ನೀರು ಸೇವಿಸಿ ಸಾಲಭಾವಿಯಲ್ಲಿ 17ಕ್ಕೂ ಹೆಚ್ಚು ಮಂದಿ ಅಸ್ವಸ್ಥ

Salabavi A case of vomiting-dysentery
ಯಲಬುರ್ಗಾ ತಾಲೂಕಿನ ಸಾಲಭಾವಿಯಲ್ಲಿ ವಾಂತಿ-ಭೇದಿ ಪ್ರಕರಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಎಚ್‌ಒ ಡಾ.ಅಲಕಾನಂದಾ ಮಳಗಿ, ಟಿಎಚ್‌ಒ ಡಾ.ಸುಮಾ ಪಾಟೀಲ್, ತಾಪಂ ಸಂತೋಷ ಪಾಟೀಲ್ ಭೇಟಿ ನೀಡಿದರು. ಸಾಲಭಾವಿಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆ. ಸಾಲಭಾವಿಯಲ್ಲಿ ನಿಯೋಜಿಸಿರುವ ಆಂಬುಲೆನ್ಸ್.
Published on

ಯಲಬುರ್ಗಾ: ತಾಲೂಕಿನ ಸಾಲಭಾವಿ ಗ್ರಾಮದಲ್ಲಿ ಬಾವಿ ನೀರು ಸೇವಿಸಿ 17ಕ್ಕೂ ಹೆಚ್ಚು ಜನರಲ್ಲಿ ಮಂಗಳವಾರ ರಾತ್ರಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಸ್ಥಳಕ್ಕೆ ತಾಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳ ತಂಡ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ಚಿಕಿತ್ಸೆ ನೀಡಲು ನಿರ್ದೇಶಿಸಿದೆ.

ಗ್ರಾಮದ ಪ್ರಾಥಮಿಕ ಶಾಲೆ ಸಮೀಪವಿರುವ ಪುರಾತನ ಕಾಲದ ಕಲ್ಲಿನ ಬಾವಿಗೆ ಎರಡು ಬೋರ್‌ವೆಲ್‌ಗಳ ನೀರು ಸಂಗ್ರಹಿಸಲಾಗುತ್ತಿದೆ. ಈ ನೀರನ್ನು ಗ್ರಾಮಸ್ಥರು ಕುಡಿಯಲು ಮತ್ತು ಮನೆ ಬಳಕೆಗೆ ಉಪಯೋಗಿಸುತ್ತಿದ್ದಾರೆ. ತೆರೆದ ಬಾವಿಯಿದ್ದು, ನೀರು ಕುಡಿದು 17ಕ್ಕೂ ಹೆಚ್ಚು ಜನರಲ್ಲಿ ವಾಂತಿ ಬೇಧಿ ಕಾಣಿಸಿಕೊಂಡಿದೆ.

ಇದನ್ನೂ ಓದಿ:

ಅಸ್ವಸ್ಥರಾದ ಮೂವರನ್ನು ಕೊಪ್ಪಳ, 6 ಮಂದಿಯನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಇನ್ನೂ 8 ಜನರಿಗೆ ಗ್ರಾಮದ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಗುಣಮುಖವಾಗಿದ್ದಾರೆ. ಆರೋಗ್ಯ ಇಲಾಖೆ, ಗ್ರಾಪಂ ಮತ್ತು ಆಶಾ ಕಾರ್ಯಕರ್ತೆಯರು ಬಾವಿ ನೀರಿನ ಮಾದರಿ ಸಂಗ್ರಹಿಸಿದ್ದು, ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದೆ. ಶುದ್ಧ ನೀರಿನ ಘಟಕ ಸ್ಥಗಿತಗೊಂಡಿದೆ.

ಡಿಎಚ್‌ಒ ಡಾ.ಅಲಕಾನಂದಾ ಮಳಗಿ ಸಾಲಭಾವಿಗೆ ಭೇಟಿ ನೀಡಿ ಪ್ರಕರಣದ ಬಗ್ಗೆ ಮಾಹಿತಿ ಪಡೆದರು. ಟಿಎಚ್‌ಒ ಡಾ.ಸುಮಾ ಪಾಟೀಲ್, ತಹಸೀಲ್ದಾರ್ ವಿಠ್ಠಲ್ ಚೌಗಲೆ, ತಾಪಂ ಇಒ ಸಂತೋಷ ಪಾಟೀಲ್, ಇಂಜಿನಿಯರ್ ರಿಜ್ವಾನಾ ಬೇಗಂ, ಪಿಡಿಒ ಕೆ.ಬಸವರಾಜ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಆರೋಗ್ಯ ಜಾಗೃತಿ ಸಭೆ ನಡೆಸಿದರು.

ಕಳೆದ ವಾರ ಸಾಲಭಾವಿ ಪ್ರಾಥಮಿಕ ಶಾಲೆಯ ಎರಡನೇ ತರಗತಿ ಮಗುವಿಗೆ ವಾಂತಿ-ಭೇದಿ ಕಾಣಿಸಿಕೊಂಡು ಕುಷ್ಟಗಿಯಲ್ಲಿ ಚಿಕಿತ್ಸೆ ಪಡೆದು ಆರಾಮಾಗಿದ್ದಾನೆ. ಏಳನೇ ತರಗತಿ ವಿದ್ಯಾರ್ಥಿಗೆ ವಾಂತಿ-ಭೇದಿ ಕಾಣಿಸಿಕೊಂಡು ಸ್ಥಳೀಯವಾಗಿ ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾನೆ. | ಪದ್ಮನಾಭ ಕರ್ಣಂ, ಬಿಇಒ, ಯಲಬುರ್ಗಾ ತಾಲೂಕಿನ ನಾನಾ ಗ್ರಾಮಗಳಲ್ಲಿ ಕಲುಷಿತ ನೀರು ಸೇವನೆಯಿಂದ ಸಂಶಯಾಸ್ಪದ ವಾಂತಿ-ಭೇದಿ ಪ್ರಕರಣ ಹೆಚ್ಚಾಗುತ್ತಿವೆ. ಸಾಲಭಾವಿಯಲ್ಲಿ ಬಾವಿ ನೀರು ಸೇವನೆಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗಿದ್ದು, ಚಿಕಿತ್ಸೆ ಪಡೆದು ಗುಣಮುಖವಾಗಿದ್ದಾರೆ. | ಸಂತೋಷ ಪಾಟೀಲ್, ತಾಪಂ ಇಒ, ಯಲಬುರ್ಗಾ ಸಾಲಭಾವಿಯಲ್ಲಿ 17 ಜನರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಮುಂಜಾಗೃತ ಕ್ರಮವಾಗಿ ಶಾಲೆಯಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆಯಲಾಗಿದೆ. ಎರಡು ಆಂಬುಲೆನ್ಸ್ ನಿಯೋಜಿಸಲಾಗಿದೆ. ಮನೆ ಮನೆಗೆ ತೆರಳಿ ಆರೋಗ್ಯ ಜಾಗೃತಿ ಕುರಿತು ಕರಪತ್ರ ಅಂಟಿಸಲಾಗಿದೆ. | ಡಾ.ಸುಮಾ ಪಾಟೀಲ್, ಟಿಎಚ್‌ಒ ಯಲಬುರ್ಗಾ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net