ವಿಧಾನಪರಿಷತ್ತಿಗೆ ಸುಶಿಕ್ಷಿತರು ಬರಬೇಕಿದೆ: ಡಾ.ನರೇಶ್ಚಂದ್ರ ಹೆಗ್ಡೆ

nareshchandra
Published on

ಮಡಿಕೇರಿ: ವಿಧಾನಪರಿಷತ್ತಿಗೆ ಸುಶಿಕ್ಷಿತರು ಹೆಚ್ಚು ಹೆಚ್ಚು ಬರಬೇಕಿದೆ ಎಂದು ನೈರುತ್ಯ ಶಿಕ್ಷಕರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಡಾ.ನರೇಶ್ಚಂದ್ರ ಹೆಗ್ಡೆ ಅಭಿಪ್ರಾಯಪಟ್ಟರು.


ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗ ಸುಶಿಕ್ಷಿತರ ಬದಲಿಗೆ ರಾಜಕಾರಣಿಗಳೇ ವಿಧಾನಪರಿಷತ್ತಿಗೆ ಬರುತ್ತಿದ್ದಾರೆ. ಇದು ಸರಿಯಲ್ಲ. ವಿದ್ಯಾವಂತರು ಮತ್ತು ಸುಶಿಕ್ಷಿತರು ವಿಧಾನಪರಿಷತ್ತಿಗೆ ಆಯ್ಕೆಯಾಗಬೇಕು ಎಂದು ಹೇಳಿದರು.


ಶಿಕ್ಷಕರ ಕ್ಷೇತ್ರದಲ್ಲಿ ಶಿಕ್ಷಕರೂ ಸ್ಪರ್ಧಿಸಲು ಹಿಂದೇಟು ಹಾಕುತ್ತಿದ್ದಾರೆ. ಬಲಾಡ್ಯ ರಾಜಕಾರಣಿಗಳ ಮುಂದೆ ಗೆಲ್ಲುವುದು ಅಸಾಧ್ಯ ಎನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.


ನೈರುತ್ಯ ಶಿಕ್ಷಕರ ಕ್ಷೇತ್ರವು ರಚನೆಯಾದ ಬಳಿಕ ಎಲ್ಲೋ ಒಂದೆರಡು ಸಂದರ್ಭಗಳನ್ನು ಹೊರತುಪಡಿಸಿದರೆ ರಾಜಕಾರಣಿಗಳು, ಶಿಕ್ಷಕರೇ ಅಲ್ಲದವರು, ಕೆಲವೊಂದು ಸಂದರ್ಭಗಳಲ್ಲಿ ಪದವಿಯನ್ನೇ ಪಡೆಯದವರು ಈ ಕ್ಷೇತ್ರದಿಂದ ಆಯ್ಕೆಯಾಗಿರುವುದು ವಿಪರ್ಯಾಸ ಎಂದರು.


ನಾನೊಬ್ಬ ಹೃದ್ರೋಗ ತಜ್ಞ ವೈದ್ಯ. ಬಹಳ ಒತ್ತಡಮಯವಾದ ವೃತ್ತಿಯಲ್ಲಿ ನಾನಿರುವೆ. ಆದರೂ, ವಿಧಾನಪರಿಷತ್ತಿಗೆ ಸುಶಿಕ್ಷಿತರು ಆಯ್ಕೆಯಾಗಬೇಕು ಎಂಬ ಉದ್ದೇಶದಿಂದ ನೈರುತ್ಯ ಶಿಕ್ಷಕರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವೆ ಎಂದು ತಿಳಿಸಿದರು.


ಸದ್ಯದಲ್ಲೇ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ನಾನು ಆಯ್ಕೆಯಾದರೆ ಏನು ಮಾಡಬಹುದು ಎಂಬುದನ್ನು ಅದರಲ್ಲಿ ಹೇಳುವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net