

ಸಿರಗುಪ್ಪ: ಭಾರತವು ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರವಾಗಿದ್ದು, ಸಾರ್ವಜನಿಕರಲ್ಲಿ ಮತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಅವಶ್ಯವಾಗಿದೆ ಎಂದು ತಾಪಂ ಇಒ ಪವನ್‌ಕುಮಾರ್ ಹೇಳಿದರು.
ನಗರದ ಡಾ.ಅಂಬೇಡ್ಕರ್ ವೃತ್ತದಲ್ಲಿ ಜಿಲ್ಲಾಡಳಿತ, ಜಿಪಂ, ತಾಪಂ, ತಾಲೂಕು ಆಡಳಿತ, ನಗರಸಭೆಯಿಂದ ಮತದಾನ ಜಾಗೃತಿಗಾಗಿ ಹಮ್ಮಿಕೊಂಡಿದ್ದ ಸೈಕಲ್ ಜಾಥಾದಲ್ಲಿ ಮಾತನಾಡಿದರು.
ಮತದಾನಕ್ಕೆ ಸಂವಿಧಾನದಲ್ಲಿ ವಿಶೇಷವಾದ ಅರ್ಥವಿದೆ. ಪ್ರಸ್ತುತ ಅನಕ್ಷರಸ್ಥರು, ಬಡವರು, ಸಮಾಜದ ಕೆಳವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುತ್ತಿದ್ದಾರೆ. ಆದರೆ, ಅಕ್ಷರಸ್ಥರು, ಸ್ಥಿತಿವಂತರು ಮತದಾನಕ್ಕೆ ಮುಂದಾಗದಿರುವುದು ಬೇಸರದ ಸಂಗತಿ. ಪ್ರಜಾಪ್ರಭುತ್ವದಲ್ಲಿ ಸರಿಯಾದ ವ್ಯಕ್ತಿ ಆಯ್ಕೆಯಾದರೆ ಅಭಿವೃದ್ಧಿ ಸಾಧ್ಯ. ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಮತದಾನ ಪವಿತ್ರವಾದುದು. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗದೆ ನಿರ್ಭಯದಿಂದ ಹಕ್ಕು ಚಲಾಯಿಸಬೇಕು ಎಂದು ತಿಳಿಸಿದರು. ಪೌರಾಯುಕ್ತ ಗುರುಪ್ರಸಾದ್ ಇತರರಿದ್ದರು.