ತಂಗಡಗಿ: ಮುದ್ದೇಬಿಹಾಳ ತಾಲೂಕಿನ ತಂಗಡಗಿಯಲ್ಲಿ ಶುಕ್ರವಾರ ಮಧ್ಯಾಹ್ನ ಬೋಲೇರೋ ವಾಹನ ಸಮೇತ 3 ವರ್ಷದ ಬಾಲಕನೊಬ್ಬ ತೆರೆದ ಬಾವಿಗೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿದ್ದಾನೆ. ಲೋಕೇಶ ಬಸವರಾಜ ಮಂಕಣಿ ಮೃತ ಬಾಲಕ. ತೋಟದ ಬಾವಿಯ ದಂಡೆಯಲ್ಲಿ ಗೇರ್ ಹಾಕಿ ವಾಹನ ನಿಲ್ಲಿಸಲಾಗಿತ್ತು. ಬಾಲಕನ ಕೈಗೆ ಅದರ ಕೀಲಿಯನ್ನು ಆಕೆಯ ಸಹೋದರಿ ಕೊಟ್ಟಿದ್ದಳು. ಅದನ್ನು ವಾಹನದ ಇಗ್ನೀಷನ್‌ಗೆ ಹಾಕಿ ತಿರುವಿದ ಕೂಡಲೇ ಗೇರ್‌ನಲ್ಲಿದ್ದ ವಾಹನ ಚಲಿಸಿ ಕೆಲವೇ ಅಡಿ ಅಂತರದಲ್ಲಿದ್ದ ಬಾವಿಯಲ್ಲಿ ಬಿದ್ದಿದೆ. ಘಟನೆ ಗೊತ್ತಾದ ಕೂಡಲೇ ಪಾಲಕರು ಬಾವಿಗಿಳಿದು ಬಾಲಕನನ್ನು ಹೊರತೆಗೆದು ಸ್ಥಳೀಯ ಆಸ್ಪತ್ರೆಗೆ ಕರೆತಂದಿದ್ದರು. ನಂತರ ಅಲ್ಲಿಂದ ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ಆಂಬುಲೆನ್ಸ್‌ನಲ್ಲಿ ತರುವಷ್ಟರಲ್ಲಿ ಬಾಲಕ ಮೃತನಾಗಿದ್ದನು. ಈ ಕುರಿತು ಇದುವರೆಗೂ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಲ್ಲ.