ಶ್ರಮಿಕ ವರ್ಗದ ಕ್ಷೇಮಾಭಿವೃದ್ಧಿಗೆ ಸರ್ಕಾರಗಳ ಶ್ರಮ

CTD 7 TAB-01
Published on

ಚಿತ್ರದುರ್ಗ: ಶ್ರಮಿಕ ವರ್ಗದ ಕ್ಷೇಮಾಭಿವೃದ್ಧಿಗೆ ಕೇಂದ್ರ, ರಾಜ್ಯಸರ್ಕಾರಗಳು ಉತ್ತಮ ಯೋಜನೆಗಳನ್ನು ಜಾರಿಗೊಳಿಸಿವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಹೇಳಿದರು.

ನಗರದ ತರಾಸು ರಂಗಮಂದಿರದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಪಂ, ಕಾರ್ಮಿಕ ಇಲಾಖೆ ಹಾಗೂ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಿಲ್ಲೆಯ ನೋಂದಾಯಿತ ಕಟ್ಟಡ ಕಾರ್ಮಿಕರ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಶ್ರಮಿಕ್ ಟ್ಯಾಬ್ ಮತ್ತು 5 ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಕಿಟ್ ವಿತರಿಸಿ ಮಾತನಾಡಿದರು.

ಮಕ್ಕಳಿಗೆ ಶಿಕ್ಷಣ ಕೊಡಿಸುವುದು ದುಡಿಯುವ ವರ್ಗದವರಿಗೆ ಕಷ್ಟ ಸಾಧ್ಯವಾದ್ದರಿಂದ ಸರ್ಕಾರ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾಗಿ ಟ್ಯಾಬ್ ಹಾಗೂ ಶಾಲಾ ಕಿಟ್ ವಿತರಿಸುತ್ತಿದೆ. ಇವುಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಕಾರ್ಮಿಕರು ಹಾಗೂ ಅವರ ಮಕ್ಕಳ ಹಿತರಕ್ಷಣೆಗೆ ಅನೇಕ ಕಾರ್ಯಕ್ರಮ ಅನುಷ್ಠಾನಗೊಳಿಸಿವೆ. ಶೈಕ್ಷಣಿಕ ಧನ ಸಹಾಯ ಯೋಜನೆ, ಮದುವೆ, ಹೆರಿಗೆ ಸಹಾಯಧನ, ಅಪಘಾತ ಸಂಭವಿಸಿದಾಗ ಪರಿಹಾರ, ಜೀವವಿಮೆ ಸೇರಿದಂತೆ ಇತರೆ ಹಲವು ಸೌಲಭ್ಯ ಒದಗಿಸುತ್ತಿದೆ. ಕೋವಿಡ್ ಸಂದರ್ಭ ಸರ್ಕಾರಗಳು ಕಾರ್ಮಿಕರ ನೆರವಿಗೆ ನಿಂತಿವೆ ಎಂದರು.

53 ಮಕ್ಕಳಿಗೆ ಟ್ಯಾಬ್, 300 ಮಕ್ಕಳಿಗೆ ಶಾಲಾ ಕಿಟ್‌ಗಳನ್ನು ವಿತರಿಸಲಾಯಿತು. ತಾಲೂಕು ಕಾರ್ಮಿಕ ನಿರೀಕ್ಷಕ ಡಿ. ರಾಜಣ್ಣ, ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ನಾಗರಾಜ್, ಕಾರ್ಮಿಕರ ಸಂಘದ ಮುಖಂಡರಾದ ರಮೇಶ್, ವೆಂಕಟೇಶಪ್ಪ, ಟಿ. ಚಂದ್ರಪ್ಪ, ನಾಗರಾಜ್, ಮೈಲಾರಪ್ಪ, ಗಂಗಮ್ಮ, ಖಾಸಿಂ, ಕಾರ್ಮಿಕ ಇಲಾಖೆ ಅಧಿಕಾರಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net