

ಮಂಡ್ಯ: ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗದ ಹಾಗೂ ಹೊರವಲಯದಲ್ಲಿ ನಿರ್ಮಾಣವಾಗಿರುವ ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ನಗರ ಹೊರವಲಯ ಬಡಾವಣೆಗಳ ಕ್ಷೇಮಾಭಿವೃದ್ಧಿ ಒಕ್ಕೂಟದ ಅಧ್ಯಕ್ಷ ಎಚ್.ಆರ್.ಅಶೋಕ್‌ಕುಮಾರ್ ಮನವಿ ಮಾಡಿದರು.
ಮಂಡ್ಯ ನಗರ ವೃದ್ಧಿಯಾಗಿ ಹಲವು ಹೊಸ ಬಡಾವಣೆ ನಿರ್ಮಾಣಗೊಂಡಿವೆ. ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಇದ್ದರೂ ನಗರಸಭೆಗೂ ಸೇರ್ಪಡೆಯಾಗದೆ ಸವಲತ್ತುಗಳಿಂದ ವಂಚಿತವಾಗಿವೆ. ಬಹುತೇಕ ಬಡಾವಣೆ ಶ್ರೀರಂಗಪಟ್ಟಣ ಚುನಾವಣಾ ಕ್ಷೇತ್ರಕ್ಕೆ ಒಳಪಟ್ಟಿದ್ದು, ಗ್ರಾಮ ಪಂಚಾಯಿತಿಗೆ ಕಂದಾಯ ಪಾವತಿ ಮಾಡುವಂತಾಗಿದೆ. ಜನರಿಗೆ ಮೂಲ ಸೌಕರ್ಯವಿರಲಿ, ಕಾವೇರಿ ನದಿ ನೀರು ಪೂರೈಕೆಯಾಗದ ಸ್ಥಿತಿಯಲ್ಲಿ ಬಡಾವಣೆಗಳಿವೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ವಿಷಾದ ವ್ಯಕ್ತಪಡಿಸಿದರು.
ಈ ಬಡಾವಣೆಗೆ ಕಾವೇರಿ ಕುಡಿಯುವ ನೀರು, ರಸ್ತೆ, ಚರಂಡಿ, ಸಮರ್ಪಕ ವಿದ್ಯುತ್ ಪೂರೈಕೆ, ಕಸ ವಿಲೇವಾರಿ, ಆಯಾ ಪಂಚಾಯಿತಿ ವ್ಯಾಪ್ತಿಗೆ ಬರುವಂತೆ ಮತಗಟ್ಟೆ ಸ್ಥಾಪನೆ, ಗ್ರಾಮಠಾಣಾ ಗಡಿ ವಿಸ್ತರಣೆ, ಅಕ್ರಮ ರಾಜಕಾಲುವೆ ತೆರವು, ಉದ್ಯಾನವನದ ಗಡಿ ಗುರುತಿಸುವಿಕೆ ಹಾಗೂ ಎಲ್ಲ ಬಡಾವಣೆಗಳನ್ನು ನಗರಸಭೆ ವ್ಯಾಪ್ತಿಗೆ ಸೇರಿಸಿ ವಾರ್ಡ್‌ಗಳ ವಿಂಗಡನೆ ಮಾಡಬೇಕು. ಈ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಘೋಷಣೆಯಾವ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿ ಘೋಷಣೆ ಮಾಡುವಂತೆ ಒತ್ತಾಯಿಸಿದರು.
ಗೌರವಾಧ್ಯಕ್ಷ ಕೆ.ಮಹಾಂತಪ್ಪ, ಎನ್.ರಾಮಚಂದ್ರ, ಎಚ್.ಎಂ.ಬಸವರಾಜು, ಕಿಶೋರ್ ಇದ್ದರು.