

ಉಡುಪಿ: ಜಿಲ್ಲೆಯ ಕೌಟುಂಬಿಕ ನ್ಯಾಯಾಲಯದಲ್ಲಿ ಕೇವಲ 240 ಪ್ರಕರಣಗಳಿವೆ. ಇತರೆಡೆಗೆ ಹೋಲಿಸಿದರೆ ಇಲ್ಲಿನ ಜನರು ಕೌಟುಂಬಿಕ ಸಮಸ್ಯೆ ನ್ಯಾಯಾಲಯದವರೆಗೆ ತಂದಿಲ್ಲ ಎಂಬುದು ಅರಿವಾಗುತ್ತದೆ. ಇದು ಈ ಭಾಗದ ಸಂಸತಿಯ ಪ್ರತಿಬಿಂಬವಾಗಿದ್ದು, ಕೌಟುಂಬಿಕ ಸಂಬಂಧಕ್ಕೆ ಮನ್ನಣೆ ನೀಡಿರುವುದು ಸಂತಸದ ವಿಚಾರ ಎಂದು ಕೌಟುಂಬಿಕ ನ್ಯಾಯಾಲಯದ ನೂತನ ಪ್ರಧಾನ ನ್ಯಾಯಾಧೀಶೆ ಕೆ.ಎಸ್ ಜ್ಯೋತಿಶ್ರೀ ಅಭಿಪ್ರಾಯಪಟ್ಟರು.
ಸೋಮವಾರ ಜಿಲ್ಲಾ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ವತಿಯಿಂದ ಏರ್ಪಡಿಸಿದ್ದ ನೂತನ ನ್ಯಾಯಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಉಡುಪಿಗೆ ವರ್ಗಾವಣೆಗೊಂಡು ಆಗಮಿಸಿದ ಪ್ರಧಾನ ಸಿವಿಲ್ ನ್ಯಾಯಾಧೀಶ ಗಗನ್ ಎಂ.ಆರ್., ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ನಾಗೇಶ್ ಎಂ. ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್.ಎಸ್.ಗಂಗಣ್ಣನವರ್ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಮಾಜಿ ಅಧ್ಯಕ್ಷ ಬಿ.ನಾಗರಾಜ್ ಮಾತನಾಡಿದರು. ಪೋಕ್ಸೊ ನ್ಯಾಯಾಲಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶ್ರೀನಿವಾಸ್ ಸುವರ್ಣ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗು ಸಿಜೆಎಂ ಪುರುಷೋತ್ತಮ್, ಒಂದನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಶ್ರೀವಾಸ್ತವ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಯೋಗೀಶ್ ಪಿ.ಆರ್., ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಬುತಾಹಿರ್ ಉಪಸ್ಥಿತರಿದ್ದರು. ಇಂಚರ ಪ್ರಾರ್ಥಿಸಿದರು. ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವಿಣ್ ಕುಮಾರ್ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ರಾಜೇಶ್ ವಂದಿಸಿದರು. ವಕೀಲೆ ಸಹನಾ ಕುಂದರ್ ನಿರೂಪಿಸಿದರು.