

ಮಂಡ್ಯ: ಕಿತ್ತೂರು ರಾಣಿ ಚೆನ್ನಮ್ಮ 200ನೇ ವಿಜಯೋತ್ಸವದ ಅಂಗವಾಗಿ ರಾಜ್ಯಸರ್ಕಾರ, ಬೆಳಗಾವಿ ಜಿಲ್ಲಾಡಳಿತ ಮತ್ತು ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿರುವ ಕಿತ್ತೂರು ರಾಣಿ ಚೆನ್ನಮ್ಮನ ವಿಜಯಜ್ಯೋತಿ ರಥವು ನಗರಕ್ಕೆ ಆಗಮಿಸಿತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದಿಂದ ಸ್ವಾಗತಿಸಿ ರಥಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ಸ್ವಾತಂತ್ರ್ಯ ಸಂಗ್ರಾಮ 1857ರಲ್ಲಿ ಸಿಪಾಯಿ ದಂಗೆ ನಡೆದಿದೆ. ಈ ಹೋರಾಟಕ್ಕೂ ಮೊದಲೇ 1824ರ ಸಮಯದಲ್ಲಿ ಬ್ರಿಟಿಷರ ವಿರುದ್ಧ ವೀರಾವೇಶದಿಂದ ಕಿತ್ತೂರು ರಾಣಿ ಚೆನ್ನಮ್ಮ ಅವರು ಹೋರಾಟ ನಡೆಸಿದರು. ಕಿತ್ತೂರು ರಾಣಿ ಚೆನ್ನಮ್ಮ ಅವರ ಹೋರಾಟದ ನೆನಪಿನಲ್ಲಿ ಹಾಗೂ ಮುಂದಿನ ಪೀಳಿಗೆಗೆ ಅವರ ಹೋರಾಟದ ಬಗ್ಗೆ ತಿಳಿಸಲು ರಾಜ್ಯ ಸರ್ಕಾರ ಪ್ರಯತ್ನ ಮಾಡುತ್ತಿದೆ ಎಂದರು.
ಕಿತ್ತೂರು ಸಂಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಧೀರತ್ವವನ್ನು ತೋರಿದ ಮಹಾತಾಯಿ ಮತ್ತು ದೇಶಪ್ರೇಮದ ಜತೆಗೆ ನಾಡಿನ ಬಗ್ಗೆ ಅಪಾರ ಪ್ರೇಮ, ಗೌರವವನ್ನು ಹೊಂದಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ ಅವರನ್ನು ನೆನೆಯುವುದು ನಮ್ಮೆಲ್ಲರ ಕರ್ತವ್ಯ. ಇತಿಹಾಸ ಕೇವಲ ಇತಿಹಾಸವಾಗಿ ಉಳಿಯಬಾರದು. ರಾಣಿ ಚೆನ್ನಮ್ಮನ ಇತಿಹಾಸವನ್ನು ಪ್ರತಿಯೊಬ್ಬರು ತಿಳಿದು, ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಬೇಕು ಎಂದು ತಿಳಿಸಿದರು.
ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ, ಕಸಾಪ ನಗರ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಹೊಳಲು ಶ್ರೀಧರ್, ಕೃಷ್ಣ, ಡಾ.ಕೃಷ್ಣೇಗೌಡ ಹುಸ್ಕೂರು, ಚಂದ್ರಲಿಂಗು, ಬಿ.ಎಂ.ಅಪ್ಪಾಜಪ್ಪ, ಮಹೇಶ್ ಸುಂಡಹಳ್ಳಿ ಇತರರಿದ್ದರು.