

ಕುಶಾಲನಗರ: ಸುತ್ತೂರು ಮಹಾ ಸಂಸ್ಥಾನದಲ್ಲಿ ಜ. 26ರಿಂದ ಫೆ. 1ರವರೆಗೆ ಹಮ್ಮಿಕೊಂಡಿರುವ ಸುತ್ತೂರು ಜಾತ್ರೋತ್ಸವದ ಬಗ್ಗೆ ಪ್ರಚುರಪಡಿಸಲು ರಾಜ್ಯದಾದ್ಯಂತ ಸಂಚರಿಸುತ್ತಿರುವ ರಥ ಶನಿವಾರ ಕುಶಾಲನಗರಕ್ಕೆ ಆಗಮಿಸಿದಾಗ ಅದ್ದೂರಿಯಾಗಿ ಸ್ವಾಗತಿಸಲಾಯಿತು.
ಮಡಿಕೇರಿ ಶಾಸಕ ಡಾ.ಮಂತರ್‌ಗೌಡ ರಥದಲ್ಲಿನ ಶ್ರೀ ಶಿವರಾತ್ರೀಶ್ವರರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ರಾಜ್ಯ ಹಾಗೂ ದೇಶಕ್ಕೆ ಆರೋಗ್ಯ ಮತ್ತು ಶಿಕ್ಷಣ ಸೇವೆಯಲ್ಲಿ ಸುತ್ತೂರು ಸಂಸ್ಥಾನದ ಕೊಡುಗೆ ಅಪಾರ. ಕೃಷಿಮೇಳ, ಸಾಂಸ್ಕೃತಿಕ ವೈವಿಧ್ಯಗಳು ಹಾಗೂ ಗ್ರಾಮೀಣ ಕ್ರೀಡೆಗಳನ್ನು ಪೋಷಿಸುತ್ತಾ ಬಂದಿರುವ ಸುತ್ತೂರು ಜಾತ್ರೆಗೆ ಕೊಡಗು ಜಿಲ್ಲೆಯಿಂದ ಹೆಚ್ಚಿನ ಭಕ್ತರು ತೆರಳಿ ಕಣ್ತುಂಬಿಕೊಳ್ಳಬೇಕು ಎಂದರು.
ಕುಶಾಲನಗರ ಪುರಸಭಾ ಅಧ್ಯಕ್ಷೆ ಜಯಲಕ್ಷ್ಮೀ ಚಂದ್ರು, ಸದಸ್ಯ ಡಿ.ಕೆ.ತಿಮ್ಮಪ್ಪ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಗಣಪತಿ ದೇವಾಲಯ ಸಮಿತಿ ಅಧ್ಯಕ್ಷ ಎಂ.ಕೆ.ದಿನೇಶ್, ಕುಶಾಲನಗರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್‌ಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಎಚ್.ವಿ.ಶಿವಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕೆ.ಎಸ್.ಮೂರ್ತಿ ಮತ್ತಿತರರು ಇದ್ದರು.