

ಶಿಗ್ಗಾಂವಿ: ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಸ್ವಾಮೀಜಿ ಸೇರಿದಂತೆ ಅವರ ಸಮಕಾಲೀನ ಮಹಾತ್ಮರ ಆರು ಉತ್ಸವ ಮೂರ್ತಿಗಳ ಹಾಗೂ ಅಂಬಾರಿ ಮಂಟಪಗಳ ಸಂಗಮ ರಥಯಾತ್ರೆಯು ಶಿಗ್ಗಾಂವಿ ತಾಲೂಕಿನ ಹುಲಗೂರ ಗ್ರಾಮಕ್ಕೆ ಸೋಮವಾರ ಆಗಮಿಸಿತು.
ಶ್ರೀ ಸಿದ್ಧಾರೂಢ ಅವರ ಸಮಕಾಲೀನ ಮಹಾತ್ಮರಾದ ಗರಗದ ಶ್ರೀ ಮಡಿವಾಳೇಶ್ವರ ಸ್ವಾಮೀಜಿ, ನವಲಗುಂದದ ಶ್ರೀ ನಾಗಲಿಂಗ ಸ್ವಾಮೀಜಿ, ಉಣಕಲ್ಲ ಶ್ರೀ ಸಿದ್ದಪ್ಪಜ್ಜ ಸ್ವಾಮೀಜಿ, ಶಿಶುನಾಳದ ಶ್ರೀ ಸಂತ ಶರೀಫ ಶಿವಯೋಗಿ ಸ್ವಾಮೀಜಿ, ಹುಬ್ಬಳ್ಳಿಯ ಶ್ರೀ ಗುರುನಾಥರೂಢ ಸ್ವಾಮೀಜಿ ಹಾಗೂ ಶ್ರೀ ಸಿದ್ಧಾರೂಢ ಸ್ವಾಮೀಜಿಗಳ ಅಂಬಾರಿ ಮಂಟಪಗಳನ್ನು ಅಲಂಕರಿಸಿದ ಟ್ರ್ಯಾಕ್ಟರ್ ಮೂಲಕ ಹುಲಗೂರ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಮಹಿಳೆಯರು ಅಂಬಾರಿ ಉತ್ಸವಕ್ಕೆ ಪೂಜೆ ಸಲ್ಲಿಸಿದರು. ರಥಯಾತ್ರೆಯಲ್ಲಿ ಬಂದವರಿಗೆ ಪ್ರಸಾದ ವ್ಯವಸ್ಥೆ ನಡೆಸಲಾಯಿತು. ಸಂಜೆ ಹುಲುಗೂರಿನಿಂದ ಶಿಶುವಿನಹಾಳ ಗ್ರಾಮಕ್ಕೆ ರಥಯಾತ್ರೆ ಬೀಳ್ಕೊಡಲಾಯಿತು.
ಉತ್ಸವ ಸೇವಾ ಟ್ರಸ್ಟ್ ಕಮಿಟಿ ಸಂಸ್ಥಾಪಕ ಅಧ್ಯಕ್ಷ ಮನೋಜಕುಮಾರ ಗದಗಿನ, ಚಂದ್ರು ಗೊಣಗಿ, ಮನೋಹರ ಕುಲಕರ್ಣಿ, ವಿ.ವೈ. ಪಾಟೀಲ, ಬಸವರಾಜ ಬಳಗಾನೂರ, ಬಸವರಾಜ ಹೊನ್ನಣ್ಣನವರ, ಬಸಣ್ಣ ಮರಡಿ, ಬಸಣ್ಣ ಪಟ್ಟಣಶೆಟ್ಟಿ, ದೇವಪ್ಪ ಕರೆಣ್ಣನವರ, ಸುರೇಶ ಉಪ್ಪಾರ, ಅಶೋಕ ಇಳಗೇರ, ಮಹಾರುದ್ರ ಕೊಡ್ಲಿ, ಮಾಂತೇಶ ಅತ್ತಿಗೇರಿ, ಕಲ್ಲಪ್ಪ ಪೂಜಾರ, ಗಿರಿಮಲ್ಲಪ್ಪ ದೇಸಾಯಿ, ರೇಣುಕಾ ಪಾಟೀಲ, ದೇವಕ್ಕ ಇಳಗೆರ, ಜಯವ್ವ ಸಜ್ಜನ, ಭೀಮಪ್ಪ ಬನ್ನೂರ, ಹುಲಗೂರ ಗ್ರಾಮದ ಹಿರಿಯರು, ಮಹಿಳೆಯರು ಇದ್ದರು.