

ವಿಜಯವಾಣಿ ಸುದ್ದಿಜಾಲ ಬದಿಯಡ್ಕ
ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಯ ಅನುಗ್ರಹದೊಂದಿಗೆ ಶ್ರೀಮಠದ 36 ಯತಿಗಳ ದಿವ್ಯ ಸಾನ್ನಿಧ್ಯವಿರುವ ಸ್ವರ್ಣಪಾದುಕಾ ಸವಾರಿಗೆ ಮುಳ್ಳೇರಿಯ ಹವ್ಯಕ ಮಂಡಲ ನೀರ್ಚಾಲು ವಲಯದ ವತಿಯಿಂದ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು.
ನೀರ್ಚಾಲು ಮಹಾಜನ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಶನಿವಾರ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಮುಳ್ಳೇರಿಯ ಮಂಡಲ ವಿಷ್ಣುಗುಪ್ತ ವಿಶ್ವವಿದ್ಯಾಲಯ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ ನೇತೃತ್ವದಲ್ಲಿ ಧೂಳೀಪೂಜೆ ನಡೆಯಿತು. ಭಾನುವಾರ ಬೆಳಗ್ಗೆ ಭಿಕ್ಷಾಂಗ ಪಾದುಕಾ ಪೂಜೆ, ಭಿಕ್ಷೆ, ಅಷ್ಟಾವಧಾನ ಸೇವೆ ನೆರವೇರಿತು. ಸಂಗೀತ, ಭಜನೆ, ನೃತ್ಯ, ಯಕ್ಷಗಾನ, ವೇಣುವಾದನ, ವಯಲಿನ್, ನಾರಾಯಣೀಯಂ, ವೇದಮಂತ್ರ, ಅಷ್ಟಕ ಮೊದಲಾದ ಸೇವೆ ನಡೆಯಿತು. ನಂತರ ಸ್ವರ್ಣಪಾದುಕೆಗಳಿಗೆ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಶ್ರೀಮಠದ ಆಚಾರ- ವಿಚಾರ ಶಾಸ್ತ್ರಿ ಗಜಾನನ ಭಟ್ ಸ್ವರ್ಣಪಾದುಕಾ ಸವಾರಿ ಬಗ್ಗೆ ಮಾತನಾಡಿ, ಭಾರತೀಯ ವಿದ್ಯೆ, ಕಲೆಗಳ ಬಗ್ಗೆ ಮುಂದಿನ ತಲೆಮಾರಿಗೆ ತಿಳಿಸುವುದು ನಮ್ಮೆಲ್ಲರ ಕರ್ತವ್ಯ. ಶ್ರೀಗಳ ಸಂಕಲ್ಪದಂತೆ ಗೋಕರ್ಣದಲ್ಲಿ ವಿಷ್ಣುಗುಪ್ತ ವಿಶ್ವವಿದ್ಯಾಪೀಠ ತಲೆಯೆತ್ತಿದೆ. ಭಾರತೀಯ ವಿದ್ಯೆ, ಕಲೆಗಳ ಉಳಿವು ವಿಷ್ಣುಗುಪ್ತ ವಿದ್ಯಾಪೀಠದೊಂದಿಗೆ ಮುಂದುವರಿಯುತ್ತಿದೆ. ಇಲ್ಲಿ ಸಲ್ಲಿಸಲ್ಪಟ್ಟ ಎಲ್ಲ ಕಾಣಿಕೆ ವಿಷ್ಣುಗುಪ್ತ ವಿದ್ಯಾಪೀಠಕ್ಕೆ ಸಮರ್ಪಿತವಾಗಲಿದೆ ಎಂದರು.
ಮಹಾಜನ ವಿದ್ಯಾಸಂಸ್ಥೆ ಮುಖ್ಯಸ್ಥ ಜಯದೇವ ಖಂಡಿಗೆ ವಂದಿಸಿದರು. ಶಿಕ್ಷಕ ವೃಂದ, ಶ್ರೀಮಠದ ಶಿಷ್ಯಂದಿರು, ಗುರಿಕ್ಕಾರರು, ಮಂಡಲ, ವಲಯ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.