

ಮಳವಳ್ಳಿ: ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿ ನೇಮಕ ಗೊಂಡಿರುವ ನಾಜಿಯಾ ಕೌಶಿರ್ ಅವರನ್ನು ಬುಧವಾತ ವಕೀಲರ ಸಂಘದ ವತಿಯಿಂದ ಸ್ವಾಗತಿಸಲಾಯಿತು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ನ್ಯಾಯಾಧೀಶೆ ನಾಜಿಯಾ ಕೌಶಿರ್, ವಕೀಲರು ಹಾಗೂ ನ್ಯಾಯಾಧೀಶರ ನಡುವೆ ಉತ್ತಮ ಭಾಂದವ್ಯ ಇದ್ದರೆ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಗೊಳಿಸಲು ಸಾಧ್ಯವಾಗುತ್ತದೆ. ಎಲ್ಲ ವಕೀಲರ ಸಹಕಾರವಿದ್ದರೆ ಜನಸಾಮಾನ್ಯರು ಸಣ್ಣಪುಟ್ಟ ವಿಷಯಗಳಿಗೂ ನ್ಯಾಯಾಲಯಗಳಿಗೆ ಅಲೆಯುವುದನ್ನು ತಪ್ಪಿಸಬಹುದಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.
ಹಿರಿಯ ಶ್ರೇಣಿ ನ್ಯಾಯಾಧೀಶ ಎಂ.ಮಹೇಂದ್ರ ಮಾತನಾಡಿ, ಪ್ರಕರಣ ನಡೆಸಲು ಇಲ್ಲಿನ ವಕೀಲರು ಉತ್ತಮ ಸಹಕಾರ ನೀಡುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಜೂ.5ರಂದು ಪಟ್ಟಣದಲ್ಲಿ ನ್ಯಾಯಾಲಯದ ವತಿಯಿಂದ ಎಲ್ಲ ಇಲಾಖೆಗಳ ಸಹಕಾರದೊಂದಿಗೆ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಮಾರಂಭವನ್ನು ಆಯೋಜಿಸಲಾಗಿದ್ದು, ವಿದ್ಯಾರ್ಥಿಗಳು, ವಕೀಲರು, ಎಲ್ಲ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಒಳಗೊಂಡ ಬೃಹತ್ ಜಾಥಾವನ್ನು ಪಟ್ಟಣದಲ್ಲಿ ನಡೆಸುವುದರ ಜತೆಗೆ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ವೇದಿಕೆ ಕಾರ್ಯಕ್ರಮದ ಜತೆಗೆ 10 ಸಾವಿರ ಗಿಡಗಳನ್ನು ಬೆಳೆಸುವ ಕಾರ್ಯಯೋಜನೆಗೆ ಚಾಲನೆ ನೀಡಲಾಗುವುದು ಎಂದ ಅವರು, ಸಾರ್ವಜನಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕೋರಿದರು.
ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಕಾವ್ಯಶ್ರೀ, ವಕೀಲರ ಸಂಘದ ಅಧ್ಯಕ್ಷ ಡಿ .ಎಂ. ಸುಂದರ್, ಕಾರ್ಯದರ್ಶಿ ನಟೇಶ್, ಉಪಾಧ್ಯಕ್ಷ ಶಿವಪ್ಪ ಸೇರಿದಂತೆ ಹಲವು ವಕೀಲರು ಇದ್ದರು.