

ಮೈಸೂರು: ಸಾಮಾಜಿಕ ನ್ಯಾಯದ ಹರಿಕಾರ ಬಸವಣ್ಣ ಅವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಸರ್ಕಾರ ಘೋಷಣೆ ಮಾಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಹೇಳಿದರು.
ನಗರದ ಡಾ.ಶ್ರೀಶಿವರಾತ್ರಿ ರಾಜೇಂದ್ರ ಸ್ವಾಮೀಜಿ ವೃತ್ತದಲ್ಲಿರುವ ಶ್ರೀಬಸವೇಶ್ವರರ ಪ್ರತಿಮೆಗೆ ಕೆ.ಆರ್.ಕ್ಷೇತ್ರದ ಕಾಂಗ್ರೆಸ್‌ನಿಂದ ಮಾಲಾರ್ಪಣೆ ಮಾಡಿ ಕರ್ನಾಟಕ ಸರ್ಕಾರದ ನಿಲುವನ್ನು ಸಂಭ್ರಮದಿಂದ ಸ್ವಾಗತಿಸಿ ಮಾತನಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಇಂತಹ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿರುವುದರಿಂದ ನಾಡಿನ ಜನತೆ ಹರ್ಷಚಿತ್ತರಾಗಿದ್ದಾರೆ. ಕಾಂಗ್ರೆಸ್ ಸರ್ಕಾರ ಈ ತೀರ್ಮಾನ ಕೇವಲ ಘೋಷಣೆ ಅಲ್ಲ, ಬಸವ ತತ್ವದ ಮೇಲಿರುವ ನಮ್ಮ ನಂಬಿಕೆ ಮತ್ತು ಬದ್ಧತೆ ಎಂದರು.
ಬಸವಣ್ಣ ಅವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಬೇಕೆಂದು ನಾಡಿನ ಲಿಂಗಾಯತ ಮಠಗಳ ಸ್ವಾಮೀಜಿಗಳು ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದ್ದರು. ಸ್ವಾಮಿಗಳ ಈ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನಮ್ಮ ಸರ್ಕಾರಕ್ಕೆ ಇದೆ. ವೈಯಕ್ತಿಕವಾಗಿ ಮತ್ತು ರಾಜಕೀಯವಾಗಿ ಬಸವಣ್ಣ ಅವರು ಸಿದ್ದರಾಮಯ್ಯ ಅವರ ವೈಚಾರಿಕ ಗುರು. ಬಸವ ಜಯಂತಿಯ ದಿನವೇ ಸಿದ್ದರಾಮಯ್ಯ ಅವರು ಮೊದಲ ಬಾರಿ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆ ನಿರ್ಧಾರ ಕಾಕತಾಳೀಯವಲ್ಲ, ಉದ್ದೇಶಪೂರ್ವಕವಾದುದು ಎಂದು ಹೇಳಿದರು.
ಆ ದಿನ ಬಸವಣ್ಣನವರ ಚಿಂತನೆಗಳ ಹಾದಿಯಲ್ಲಿ ನಡೆಯುತ್ತೇನೆಂದು ಪ್ರಮಾಣ ಮಾಡಿದ್ದ ಸಿದ್ದರಾಮಯ್ಯ ಅವರು, ಅದರಂತೆ ಬಸವಣ್ಣನವರ ತತ್ವದ ದಾರಿಯಲ್ಲಿಯೇ ನಡೆಯುತ್ತಿದ್ದಾರೆ. ಈ ಜಾಗೃತಿ ನಮ್ಮ ಸರ್ಕಾರದ ಪ್ರತಿಯೊಬ್ಬರ ಮನಸ್ಸಿನಲ್ಲಿಯೂ ಇರಬೇಕೆಂಬ ಉದ್ದೇಶದಿಂದಲೇ ರಾಜ್ಯದ ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಲು ಆದೇಶಿಸಿದ್ದರು ಎಂದರು.
ದೇಶದ ಇತಿಹಾಸದಲ್ಲಿ ಹನ್ನೆರಡನೆ ಶತಮಾನ ಅತ್ಯಂತ ಮಹತ್ವಪೂರ್ಣವಾದುದು. ಅಜ್ಞಾನ, ಜಾತೀಯತೆ, ಮತಾಂಧತೆ, ಶೋಷಣೆ, ಮೌಢ್ಯಗಳಿಂದ ಮುಳುಗಿಹೋಗಿದ್ದ ಸಮಾಜವನ್ನು ಮೇಲೆತ್ತಲು ಅರಸ ಬಿಜ್ಜಳನಿಗೆ ಹಣಕಾಸು ಸಚಿವರಾಗಿದ್ದ ಬಸವಣ್ಣನವರು, ರಾಜಿ ಇಲ್ಲದ ಬದ್ಧತೆ, ಪ್ರಶ್ನಾತೀತವಾದ ಜನಪರ ಕಾಳಜಿ ಮೂಲಕ ಮಾಡಿದ ಪ್ರಯತ್ನ-ಪ್ರಯೋಗಗಳು ಪ್ರಪಂಚದ ಎಲ್ಲ ಆಡಳಿತಗಾರರ ಆದರ್ಶ ಎಂದು ಬಣ್ಣಿಸಿದರು.
ಕೆ.ಆರ್.ಬ್ಲಾಕ್ ಅಧ್ಯಕ್ಷ ಜಿ.ಸೋಮಶೇಖರ್, ಮುಖಂಡರಾದ ಶ್ರೀಧರ್, ರವಿಶಂಕರ್, ಪ್ರಕಾಶ್, ವಿಜಯ್ ಕುಮಾರ್, ಡೇರಿ ವೆಂಕಟೇಶ್, ಶಿವಮಲ್ಲಪ, ಪುಟ್ಟಪ್ಪ, ಕೇಬಲ್ ಮಹಾದೇವು, ಟೈಲರ್ ಮಹಾದೇವ್, ಧರ್ಮೆಂದ್ರ , ರಾಜೇಶ್, ಪ್ರತಾಪ್‌ರಾವ್ (ಗಣೇಶ್), ವಿನಯ್, ರಾಕೇಶ್, ಫಾರೂಖ್, ನಾಸೀರ್, ಲೋಕೇಶ್ ಮಾದಾಪುರ, ಯೋಗೇಶ್ ಉಪ್ಪಾರ್, ರಾಘು, ಮಹೇಂದ್ರ, ಭೈರಪ್ಪ, ಕೇಬಲ್ ಶೇಖರ್, ಗಿರೀಶ್, ಇಂದ್ರಮ್ಮ, ಭರತ್ ಇತರರು ಇದ್ದರು.