

ವಿಜಯಪುರ: ಕನ್ಹೇರಿಯ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿಗಳ ವಿಜಯಪುರ ಜಿಲ್ಲಾ ಪ್ರವೇಶ ನಿರ್ಬಂಧದ ಹಿನ್ನೆಲೆ ಬೆಳಗಾವಿಯಲ್ಲಿ ಸಭೆ ನಡೆಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಹಲವು ಮುಖಂಡರುಗಳು ಬಬಲೇಶ್ವರದಲ್ಲಿಯೇ ಬಸವಾದಿ ಶರಣರ ಹಿಂದು ಸಮಾವೇಶ ಕೈಗೊಳ್ಳುವ ನಿರ್ಧಾರ ಪ್ರಕಟಿಸಿರುವುದನ್ನು ಸಚಿವ ಎಂ.ಬಿ. ಪಾಟೀಲ ಸ್ವಾಗತಿಸಿದ್ದಾರೆ.
ಕೊನೆಗೂ ಇವರೆಲ್ಲ ಬಸವಾದಿ ಶರಣರ ಕಡೆ ಬಂದರಲ್ಲ; ಅದೇ ಖುಷಿ ಎಂದಿರುವ ಎಂ.ಬಿ. ಪಾಟೀಲರು, ಬಸವಾದಿ ಶರಣರ ಯಾವುದೇ ಕಾರ್ಯಕ್ರಮಕ್ಕೂ ನಾನು ಸಹಕಾರ ಮಾಡುವೆ. ನನ್ನ ಬೆಂಬಲ ಯಾವಾಗಲೂ ಇದೆ ಎಂದರು.
ಇದು ಬಸವಜನ್ಮ ಭೂಮಿ ಇದೆ. ಬಸವಾದಿ ಶರಣರ ತತ್ವ, ಸಿದ್ಧಾಂತಕ್ಕೆ ಯಾವಾಗಲು ಬೆಂಬಲ ಇದೆ. ಹೀಗಾಗಿ ಬಬಲೇಶ್ವರದಲ್ಲಿ ಸಮಾವೇಶ ಮಾಡುವುದಾದರೆ ಸ್ವಾಗತ ಎಂದು ಶನಿವಾರ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ನನ್ನನ್ನು ಟಾರ್ಗೆಟ್ ಮಾಡಿದಷ್ಟು ನಾನು ಬಲಗೊಳ್ಳುತ್ತೇನೆ ಎಂದ ಎಂ.ಬಿ. ಪಾಟೀಲರು, ಈ ಹಿಂದೆ 2018ರಲ್ಲಿ ಎಂಥ ಟಾರ್ಗೆಟ್ ಆಗಿತ್ತು? ಪ್ರಧಾನಿ ನರೇಂದ್ರ ಮೋದಿ ಸಾರವಾಡದಲ್ಲಿ ಸಮಾವೇಶ ಮಾಡಿದ್ದರು. ಆ ಚುನಾವಣೆಯಲ್ಲಿಯೇ 30 ಸಾವಿರ ಲೀಡ್ ಆಯಿತು. ನನ್ನ ಜನ ನನ್ನ ಜೊತೆ ಇದ್ದಾರೆ. ನನ್ನ ಜನರ ಮೇಲೆ ನನಗೆ ನಂಬಿಕೆ ಇದೆ. ಜನರ ನಂಬಿಕೆಯೂ ನನ್ನ ಮೇಲಿದೆ. ಅನುಭವ ಮಂಟಪದ ಶಕ್ತಿ ನಮ್ಮ ಜೊತೆಗಿದೆ ಎಂದರು.
ಇನ್ನು ಕಾಂಗ್ರೆಸ್‌ನಲ್ಲಿ ಸಿದ್ಧರಾಮಯ್ಯನ ನಂತರ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗುತ್ತಾರೆ ಎಂಬ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಡಾ.ಎಂ.ಬಿ. ಪಾಟೀಲರು, ಯತ್ನಾಳ ನಮ್ಮ ಪಕ್ಷದಲ್ಲಿಯೇ ಇಲ್ಲ, ತಮ್ಮದೇ ಪಕ್ಷದಿಂದ ಹೊರಹಾಕಲ್ಪಟ್ಟಿರುವ ಯತ್ನಾಳರಿಗೆ ನಮ್ಮ ಪಕ್ಷದ ವಿಷಯ ಅವರಿಗೆ ಹೇಗೆ ಗೊತ್ತು? ಸಚಿವ ಸಂಪುಟ ವಿಸ್ತರಣೆ ಎಲ್ಲವೂ ಹೈಕಮಾಂಡ್‌ಗೆ ಬಿಟ್ಟ ವಿಷಯ ಆ ಬಗ್ಗೆ ನಾನೇನೂ ಹೇಳುವುದಿಲ್ಲ ಎಂದರು.