

ಮಂಡ್ಯ: ಜಗತ್ತಿನ ಸಾಂಸ್ಕೃತಿಕ ನಾಯಕ ಬಸವಣ್ಣನವರ ತತ್ವ ಹಾಗೂ ಆದರ್ಶವನ್ನು ಎಲ್ಲರೂ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಬಸವ ಜಯಂತಿ ಅಂಗವಾಗಿ ರಾಜ್ಯದ 15 ಜಿಲ್ಲೆಗಳಲ್ಲಿ ಏ.17ರಿಂದ 29ರವರೆಗೆ ಸಂಚಾರ ಮಾಡುತ್ತಿರುವ ಅನುಭವ ಮಂಟಪ-ಬಸವಾದಿ ಶರಣರ ವೈಭವ ರಥಯಾತ್ರೆಯನ್ನು ಸ್ವಾಗತಿಸಿ ಮಾತನಾಡಿದ ಅವರು, ಬಸವಣ್ಣ ಕರ್ನಾಟಕ ಮಾತ್ರವಲ್ಲ ವಿಶ್ವಕ್ಕೆ ಮಾದರಿ. ಇಡೀ ಜಗತ್ತಿಗೆ ವಿಶ್ವ ಗುರು ಆದವರು ಎಂದು ಹೇಳಿದರು.
ಚಿಂತಕ, ವಚನಕಾರರಾಗಿ 12ನೇ ಶತಮಾನದಲ್ಲಿ ಸಮಾಜಕ್ಕೆ ನೀಡಿರುವ ಬೋಧನೆ, ಚಿಂತನೆ, ಮೌಲ್ಯ ಹಾಗೂ ಆದರ್ಶ ನಿಜಕ್ಕೂ ಅಪಾರ. ಅವರ ಹಾದಿಯಲ್ಲಿ ಪ್ರತಿಯೊಬ್ಬರು ಸಾಗಬೇಕು. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಯಲ್ಲಿ ಮಹತ್ತರ ಬದಲಾವಣೆಯ ಆಶಯವನ್ನು ಕಂಡಂತಹ ಮಹಾನ್ ಮಾನವತವಾದಿ. ಅವರ ಜಯಂತಿ ಅಂಗವಾಗಿ ಸರ್ಕಾರ ಕೈಗೊಂಡಿರುವ ಅನುಭವ ಮಂಟಪ - ಬಸವಾದಿ ಶರಣರ ವೈಭವ ರಥಯಾತ್ರೆ ಸ್ವಾಗತಿಸಿದ್ದು ಸಂತಸದ ಸಂಗತಿ ಎಂದು ಹರ್ಷ ವ್ಯಕ್ತಪಡಿಸಿದರು.
ಇಂತಹ ಮಹಾನ್ ಚಿಂತಕರ ಆದರ್ಶಗಳನ್ನು ನಾಡಿನಾದ್ಯಂತ ಪಸರಿಸಬೇಕೆಂಬ ಉದ್ದೇಶದಿಂದ ರಾಜ್ಯಸರ್ಕಾರ ಏ.29 ಹಾಗೂ 30 ರಂದು ಅನುಭವ ಮಂಟಪ ಬಸವಾದಿ ಶರಣರ ವೈಭವ ಎಂಬ ಪರಿಕಲ್ಪನೆಯಲ್ಲಿ ವಿಶೇಷ ಕಾರ್ಯಕ್ರಮವನ್ನು ಕೂಡಲಸಂಗಮದಲ್ಲಿ ಆಯೋಜಿಸಿರುವುದು ಹೆಮ್ಮೆಯ ಸಂಗತಿ. ಬಸವಣ್ಣವರ ಚಿಂತನೆ ಮತ್ತು ಆದರ್ಶಗಳ ಬಗ್ಗೆ ಮುಂದಿನ ಪೀಳಿಗೆಗಳಲ್ಲಿ ಹೆಚ್ಚಾಗಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದಾರ್, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಸಭಾಧ್ಯಕ್ಷೆ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ರೆಡ್‌ಕ್ರಾಸ್ ನಿರ್ದೇಶಕ ರಂಗಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಎಂ.ವಿ.ಧರಣೇಂದ್ರಯ್ಯ, ವಿವಿಧ ಸಮುದಾಯ ಮುಖಂಡರಾದ ಎಲ್.ಸಂದೇಶ್, ಮಂಜುನಾಥ ಬೆಟ್ಟಹಳ್ಳಿ, ರುದ್ರಸ್ವಾಮಿ, ಕೆಂಪಯ್ಯ ಇತರರಿದ್ದರು.