

ಬೆಂಗಳೂರು ಗ್ರಾಮಾಂತರ: ಬರೋಬ್ಬರಿ 9 ತಿಂಗಳ ಬಳಿಕ ಶಾಲೆಗಳು ಪುನರಾರಂಭಗೊಳ್ಳುತ್ತಿದ್ದು, ವಿದ್ಯಾರ್ಥಿಗಳ ಸ್ವಾಗತಕ್ಕೆ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಸರ್ಕಾರದ ಮಾರ್ಗಸೂಚಿ ಅನ್ವಯ ಎಲ್ಲ ಪೂರ್ವ ಸಿದ್ಧತೆಗಳೊಂದಿಗೆ ವಿದ್ಯಾರ್ಥಿಗಳನ್ನು ಎದುರುಗೊಳ್ಳಲು ಶಾಲಾ ಸಿಬ್ಬಂದಿ ಕಾತರರಾಗಿದ್ದಾರೆ.
ಮಕ್ಕಳ ಶೈಕ್ಷಣಿಕ ಚಟುವಟಿಕೆ ಕಸಿದಿದ್ದ ಕರೊನಾ ಮಹಾಮಾರಿ ನಿಯಂತ್ರಣಕ್ಕೆ ಬಂದ ಹಿನ್ನೆಲೆಯಲ್ಲಿ ಹೊಸವರ್ಷದಂದು ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಪುನರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ಇದರಂತೆ ಜಿಲ್ಲೆಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿ ಮಾಡಲಾಗಿದೆ. ವಿಶೇಷವಾಗಿ ಸರ್ಕಾರಿ ಶಾಲೆಗಳಲ್ಲಿ ‘ಶೈಕ್ಷಣಿಕ ಹಬ್ಬ’ದ ಹೆಸರಿನಲ್ಲಿ ಶಾಲಾ ಆವರಣವನ್ನು ತಳಿರು ತೋರಣಗಳಿಂದ ಸಿಂಗರಿಸಿ ಸಿಬ್ಬಂದಿ ವರ್ಗ ಸಾಂಪ್ರದಾಯಿಕ ಉಡುಪಿನೊಂದಿಗೆ ಮಕ್ಕಳನ್ನು ಸ್ವಾಗತಿಸಲು ಸಿದ್ಧರಾಗಿದ್ದಾರೆ.
ಜನಪ್ರತಿನಿಧಿಗಳಿಗೆ ಆಹ್ವಾನ: ಶಾಲಾ ಪುನರಾರಂಭದಂದು ಚುನಾಯಿತ ಪ್ರತಿನಿಧಿಗಳು, ಸ್ಥಳೀಯ ಮುಖಂಡರಿಗೆ ಆಹ್ವಾನ ನೀಡಿರುವ ಶಿಕ್ಷಣ ಇಲಾಖೆ ಮಕ್ಕಳಲ್ಲಿ ಕರೊನಾ ಆತಂಕ ದೂರ ಮಾಡುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಕ್ಕೆ ಮುಂದಾಗಿದೆ. ಇದರೊಂದಿಗೆ ಪಾಲಕರಿಗೂ ಆಹ್ವಾನ ನೀಡಲಾಗಿದ್ದು, ಮಕ್ಕಳ ಸುರಕ್ಷತೆಗೆ ಕೈಗೊಂಡಿರುವ ಕ್ರಮಗಳನ್ನು ಖುದ್ದು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಜತೆಗೆ ಪಾಲಕರ ಸಭೆ ನಡೆಸಿ ಸಲಹೆ ಸೂಚನೆ ಪಡೆಯಲು ಇಲಾಖೆ ಪ್ರತಿ ಪಾಲಕರಿಗೂ ಆಹ್ವಾನ ನೀಡಿದೆ.
ಸಿಬ್ಬಂದಿಗೆ ಕರೊನಾ ಟೆಸ್ಟ್: ಶಾಲೆ ಪುನರಾರಂಭದ ಹಿನ್ನೆಲೆಯಲ್ಲಿ ಶಿಕ್ಷಕರೂ ಸೇರಿ ಎಲ್ಲ ಸಿಬ್ಬಂದಿ ವರ್ಗಕ್ಕೂ ಕರೊನಾ ಟೆಸ್ಟ್ ನಡೆಸಲಾಗಿದ್ದು, ಎಲ್ಲರಿಗೂ ವರದಿ ನೆಗೆಟಿವ್ ಬಂದಿದೆ ಎಂದು ಗ್ರಾಮಾಂತರ ಶಿಕ್ಷಣ ಇಲಾಖೆ ತಿಳಿಸಿದೆ.
ಪಾಲಕರಿಂದ ಒಪ್ಪಿಗೆ ಪತ್ರ: ಶಾಲೆ ಪುನರಾರಂಭದ ಬಗ್ಗೆ ಸರಣಿ ಸಭೆ ನಡೆಸಿರುವ ಇಲಾಖೆ ಪಾಲಕರಿಂದ ಒಪ್ಪಿಗೆ ಪತ್ರ ಪಡೆದು ವಿದ್ಯಾರ್ಥಿಗಳ ಸ್ವಾಗತಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ ಭಾಗಶಃ ಪಾಲಕರಿಂದ ಸಮ್ಮತಿ ದೊರೆತಿದೆ. ಮಕ್ಕಳ ಭವಿಷ್ಯದ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸುವುದು ಹೆಚ್ಚು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗಿಲ್ಲ ಕರೊನಾ ಟೆಸ್ಟ್!: ಕರೊನಾ ಪರೀಕ್ಷೆಗೆ ವಿದ್ಯಾರ್ಥಿಗಳು ಹಿಂದೇಟು ಹಾಕುವ ಹಿನ್ನೆಲೆಯಲ್ಲಿ ಟೆಸ್ಟ್ ಕಡ್ಡಾಯಗೊಳಿಸಿಲ್ಲ. ಆದರೆ ಶಾಲೆಗೆ ಬರುವ ಮಕ್ಕಳಲ್ಲಿ ಯಾವುದಾದರೂ ರೋಗ ಲಕ್ಷಣ ಕಂಡುಬಂದರೆ ಕೂಡಲೇ ಪಾಲಕರ ಸಮನ್ವಯದೊಂದಿಗೆ ಚಿಕಿತ್ಸೆ ಕೊಡಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಖಾಸಗಿ ಶಾಲೆಗಳ ಆರಂಭ ಡೌಟ್: ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು ತೋರಿಸುತ್ತಿರುವಷ್ಟು ಉತ್ಸಾಹ ಖಾಸಗಿ ಶಾಲೆಗಳಲ್ಲಿ ಕಂಡುಬರುತ್ತಿಲ್ಲ. ಭಾಗಶಃ ಖಾಸಗಿ ಶಾಲೆಗಳು ಪುನರಾರಂಭಕ್ಕೆ ಹಿಂದೇಟು ಹಾಕುತ್ತಿವೆ. ಯಾವಾಗ ಶಾಲೆ ಆರಂಭಿಸಬೇಕೆಂಬ ಗೊಂದಲದಲ್ಲಿದ್ದು, ಪಾಲಕರಿಗೂ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೆಲವಷ್ಟು ಖಾಸಗಿ ಶಾಲೆಗಳು ವಸ್ತುಸ್ಥಿತಿ ನೋಡಿಕೊಂಡು ವಾರದ ಬಳಿಕ ಶಾಲೆ ಆರಂಭಿಸಲು ಚಿಂತನೆ ನಡೆಸಿವೆ ಎನ್ನಲಾಗಿದೆ. ಆದರೆ ಹಲವು ಶಾಲೆಗಳು ಪುನರಾರಂಭದ ಸುಳಿವು ಬಿಟ್ಟುಕೊಡದೆ ಆನ್‌ಲೈನ್ ತರಗತಿ ಮುಂದುವರಿಸಿವೆ.
ಖಾಸಗಿ ಶಾಲೆಗಳಿಗೆ ಈಗಾಗಲೇ ಮಾಹಿತಿ ನೀಡಿದ್ದು, ಜ.1ರಿಂದ ಶಾಲೆ ಪುನರಾರಂಭ ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸಲಾಗಿದೆ. ಸರ್ಕಾರದ ಆದೇಶ ಪಾಲಿಸದ ಶಾಲೆಗಳಿಗೆ ನೋಟಿಸ್ ನೀಡಿ ಕ್ರಮಕೈಗೊಳ್ಳಲಾಗುವುದು. ತಾಲೂಕಿನ ಎಲ್ಲ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕನ್ನಯ್ಯ, ಕ್ಷೇತ್ರ ಶಿಕ್ಷಣಾಧಿಕಾರಿ ಹೊಸಕೋಟೆ ಕರೊನಾ ನಿಯಮಗಳ ಪಾಲನೆಯೊಂದಿಗೆ ಮಕ್ಕಳನ್ನು ಶಾಲೆಗೆ ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ, ಮಕ್ಕಳನ್ನು ಎದುರುಗೊಳ್ಳಲು ನಾವೆಲ್ಲ ಕಾತರರಾಗಿದ್ದೇವೆ, ಮತ್ತೆ ಶಾಲೆಯಲ್ಲಿ ಮಕ್ಕಳ ಕಲರವ ಕಂಡುಬರಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲೆಗಳು ಪುನರಾರಂಭಗೊಳ್ಳಲಿವೆ. ಬೈಯಪ್ಪರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡಬಳ್ಳಾಪುರ