

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಕಷ್ಟ ಪಟ್ಟರೆ ಉತ್ತಮ ಫಲ ಸಿಗುತ್ತದೆ. ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಬೆಳೆಸಬೇಕು. ಛಲವಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬಹುದು ಎಂದು ಕವಿವಿ ವಿಶ್ರಾಂತ ಕುಲಪತಿ ಪ್ರೊ. ಪ್ರಮೋದ ಗಾಯಿ ಹೇಳಿದರು.
ನಗರದ ವನಿತಾ ಮಹಿಳಾ ಕಲಾ ಹಾಗೂ ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿನಿಯರ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾಗೀರಥಿಬಾಯಿಯವರ ತಪಸ್ಸಿನ ಸಂಸ್ಥೆಯಲ್ಲಿ ಓದುತ್ತಿರುವುದು ನಿಮ್ಮ ಪುಣ್ಯ ಎಂದರು.
ವನಿತಾ ಸೇವಾ ಸಮಾಜದ ಅಧ್ಯಕ್ಷ ಟಿ.ಎಲ್. ಪಾಟೀಲ ಮಾತನಾಡಿ, ಉಪನ್ಯಾಸಕರ ಪರಿಶ್ರಮದಿಂದ ಕಾಲೇಜು ಕಡಿಮೆ ಅವಽಯಲ್ಲಿ ಉತ್ತಮ ಹೆಸರು ಪಡೆಯುತ್ತಿದೆ ಎಂದರು.
ಶಿಕ್ಷಕಿ ತನುಜಾ ಓಲೆಕಾರ ಮಾತನಾಡಿ, ಧಾರವಾಡ ಸಾಧಕರ ತವರೂರು ಮತ್ತು ಸಾಧನೆ ಮಾಡಲು ಅರಸಿಬರುವ ಊರು. ವನಿತಾ ಸೇವಾ ಸಮಾಜ ಹೆಣ್ಣು ಮಕ್ಕಳನ್ನು ಗುರುತಿಸಿ ಸಹಾಯ ಮಾಡುತ್ತದೆ. ನಿಮ್ಮ ಕನಸು ಈಡೇರಿಸಿಕೊಳ್ಳಲು ಈಗಿನಿಂದಲೇ ಸತತ ಪ್ರಯತ್ನ ಮಾಡಬೇಕು ಎಂದರು.
ಆಡಳಿತ ಮಂಡಳಿಯ ಸಹ ಕಾರ್ಯದರ್ಶಿ ಅಶೋಕ ನಾಯಕ, ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಯಶೋಧಾ ಅಂಗಡಿ, ಪ್ರಾಚಾರ್ಯ ಆರ್.ಬಿ. ದೊಡಮನಿ ಹಾಗೂ ಉಪನ್ಯಾಸಕರಿದ್ದರು.
ವಿಜಯಕುಮಾರ ಕೌಶಿಕ ಸ್ವಾಗತಿಸಿದರು. ಸಂತೋಷ ಕಲಕೇರಿ ಪ್ರಮಾಣವಚನ ಬೋಧಿಸಿದರು. ಉಪನ್ಯಾಸಕಿ ಶುಭಾ ಪರೀಟ ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವನೇಶ್ವರಿ ಮಾದರ ಹಾಗೂ ಅಮೂಲ್ಯ ಭಜಂತ್ರಿ ನಿರೂಪಿಸಿದರು. ಪದ್ಮಾವತಿ ದಿಬ್ಬದಮನಿ ವಂದಿಸಿದರು.